ಅ.1ರಿಂದ ಶಾಲೆಗಳು ಆರಂಭ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ನಿಗದಿತ ವೇಳೆಯಲ್ಲೇ ಪೂರ್ಣಗೊಳಿಸಲು ಶೇ 40 ರಿಂದ 45 ರಷ್ಟು ಪಠ್ಯ ಕಡಿತ

ಬೆಂಗಳೂರು, ಆ. 24- ಬರುವ ಅಕ್ಟೋಬರ್ 1 ರಿಂದ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು,  ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ನಿಗದಿತ ವೇಳೆಯಲ್ಲೇ ಪೂರ್ಣಗೊಳಿಸಲು ಶೇ. 40 ರಿಂದ 45 ರಷ್ಟು ಪಠ್ಯ ಕಡಿತ ಮಾಡಲು ಮುಂದಾಗಿದೆ. 

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಪುನರಾರಂಭಕ್ಕೆ ತಡೆಹಿಡಿದಿದ್ದ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಪದವಿ ಮತ್ತು ಅದಕ್ಕಿಂತ ಉನ್ನತ ಮಟ್ಟದ ಶಿಕ್ಷಣ ಸೆಪ್ಟೆಂಬರ್ 1 ರಿಂದಲೇ ಆನ್‍ಲೈನ್ ಶಿಕ್ಷಣ ನೀಡಲಿದ್ದು, ಅಕ್ಟೋಬರ್ ಎಂದಿನಂತೆ ಶಾಲಾ – ಕಾಲೇಜುಗಳನ್ನು ತೆರೆಯಲಿದೆ.  ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೊರೊನಾ ತಹಬದಿಗೆ ಬರಬಹುದೆಂಬ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷ ಪುನರಾರಂಭಿಸಲು ಇಂತಹ ಕ್ರಮ ಕೈಗೊಂಡಿದೆ. 

ಅಕ್ಟೋಬರ್ ಪ್ರಾರಂಭ ಇಲ್ಲವೆ ಅಂತ್ಯದ ವೇಳೆಗೆ ಕೊರೋನಾ ಸಾಂಕ್ರಾಮಿಕಕ್ಕೆ ಲಸಿಕೆಗಳು ಮುಕ್ತ ಮಾರುಕಟ್ಟೆಗೆ ಬರಬಹುದೆಂಬ ನಿರೀಕ್ಷೆ ಇದೆ. 

ಇಷ್ಟರ ನಡುವೆಯು ಶಾಲಾ – ಕಾಲೇಜು ಆರಂಭಕ್ಕೆ ಕೆಲವು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ನಾಲ್ಕು ಗಂಟೆಗಳ ತರಗತಿಯನ್ನು ಪ್ರತಿನಿತ್ಯ ಸೀಮಿತ ಗೊಳಿಸಲಿದೆ.  ಶಾಲಾ-ಕಾಲೇಜು ಆವರಣದಲ್ಲಿ ಗುಂಪು ಕೂಡಬಾರದೆಂಬ ಉದ್ದೇಶದಿಂದ ವಿವಿಧ ತರಗತಿಗಳಿಗೆ ಬದಲಾದ ಸಮಯವನ್ನು ನಿಗದಿಪಡಿಸುತ್ತಿದೆ. 

ಕಳೆದ ಜೂನ್ ತಿಂಗಳಿನಿಂದಲೇ ಶಾಲಾ ಕಾಲೇಜುಗಳು ಆರಂಭಗೊಳ್ಳಬೇಕಿತ್ತು. ಕೊರೊನಾ ಸಾಂಕ್ರಾಮಿಕ ತಹಬದಿಗೆ ಬಾರದ ಕಾರಣ ನಾಲ್ಕು ತಿಂಗಳು ತಡವಾಗಿ ಪ್ರಸಕ್ತ ವರ್ಷದ ಶೈಕ್ಷಣಿಕ ಆರಂಭಗೊಳ್ಳುತ್ತಿದೆ. 

ಮುಂದಿನ ಶೈಕ್ಷಣಿಕ ವರ್ಷಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹಾಲಿ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಕಡಿತ ಮಾಡಿ, ವಿದ್ಯಾರ್ಥಿಗಳಿಗೆ ಹೊರೆಯನ್ನು ತಗ್ಗಿಸಿ, ಅವರ ಮೇಲೆ ಮಾನಸಿಕ ಒತ್ತಡ ತರದಂತೆ ಮಾಡಲು ಪಠ್ಯಕ್ರಮದಲ್ಲೂ ಕಡಿತ ಮಾಡುತ್ತಿದೆ. 

ಈಗಾಗಲೇ 1 ರಿಂದ 9 ತರಗತಿ ಮತ್ತು 1ನೇ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಮುಂಬಡ್ತಿ ನೀಡಿದೆ. ಅದೇ ರೀತಿ ಉನ್ನತ ಶಿಕ್ಷಣದಲ್ಲಿ ಅಂತಿಮ ವರ್ಷದ ಪರೀಕ್ಷೆ ಹೊರತುಪಡಿಸಿ, ಉಳಿದ ಸೆಮಿಸ್ಟರ್ ಮತ್ತು ವಾರ್ಷಿಕ ಪರೀಕ್ಷೆಗಳನ್ನು ರದ್ದುಮಾಡಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಲಾಗಿದೆ. 

error: Content is protected !!