ಜಗಳೂರು ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಅಭಾವ : ರೈತರಿಂದ ಪ್ರತಿಭಟನೆ

ಜಗಳೂರು, ಆ.24- ರೈತರಿಗೆ ಯೂರಿಯಾ ಗೊಬ್ಬರ ಮತ್ತು ಔಷಧಿಯನ್ನು ಕೃಷಿ ಇಲಾಖೆ ತರಿಸಿಕೊಡಲು ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಮಾತನಾಡಿ, ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಗಳಿಗೆ ಬೇಕಾದ ಯೂರಿಯಾ ಗೊಬ್ಬರವಿಲ್ಲದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರು ಬೇರೆ ಜಿಲ್ಲೆಗೆ ಹೋಗಿ ಹೆಚ್ಚಿನ ಬೆಲೆಗೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಕಸಬಾ ಹೋಬಳಿಯಲ್ಲಿ ಮೆಕ್ಕೆಜೋಳಕ್ಕೆ ಹುಳ ಬಾಧೆ ಪ್ರಾರಂಭವಾಗಿದೆ. ಆದರೂ ಸಹ ಕೃಷಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.

ಅಧಿಕಾರಿಗಳಿಗೆ ಕೇಳಿದರೆ, ಹೂ ಬಿಡುವ ಸಂದರ್ಭದಲ್ಲಿ ಹಾಕಬಾರದು ಎಂಬ ಸಬೂಬನ್ನು ರೈತರಿಗೆ ಹೇಳುತ್ತಿದ್ದಾರೆ. ರೈತರು ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು ಎನ್ನುವುದು ರೈತರಿಗೆ ತಿಳಿದಿದೆ. ಏಕೆಂದರೆ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯಕ್ರಮಗಳು ಒಂದೇ ರೀತಿಯಾಗಿರುವುದಿಲ್ಲ. ಗಿಡಗಳಿಗೆ ಸದೃಢವಾಗಿ ಬರಲು ಯೂರಿಯಾದ ಅವಶ್ಯಕತೆ ಇದ್ದು, ಇಂತಹ ಸಮಯದಲ್ಲಿ ತಾಲ್ಲೂಕು ಆಡಳಿತವು ಕೈಕಟ್ಟಿ ಕುಳಿತಿದೆ ಎಂದರು.

ಯೂರಿಯಾ ಗೊಬ್ಬರವನ್ನು ಮತ್ತು ಉತ್ತಮವಾದ ಗುಣಮಟ್ಟದ ಔಷಧಿಯನ್ನು ರೈತ ಸಂಪರ್ಕಕ್ಕೆ ತರಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗೌರವಾಧ್ಯಕ್ಷರಾದ ಗಂಗಾಧರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ತಾಲ್ಲೂಕು ಕಾರ್ಯದರ್ಶಿ ದೊಣ್ಣೆಹಳ್ಳಿ ಲೋಕೇಶ್, ಕಸವನಹಳ್ಳಿ ನಾಗರಾಜ್,  ಎಂ.ಶರಣಪ್ಪ, ಪ್ರಹ್ಲಾದಪ್ಪ ಸೇರಿದಂತೆ   ರೈತ ಮುಖಂಡರು ಭಾಗವಹಿಸಿದ್ದರು.

error: Content is protected !!