ಜಿಲ್ಲಾ ಕಾಂಗ್ರೆಸ್ ನಿಂದ` ಜನಧ್ವನಿ’ ಬೃಹತ್ ಪ್ರತಿಭಟನೆ, ಬಿಜೆಪಿ ವಿರುದ್ಧ ವಾಗ್ದಾಳಿ
ದಾವಣಗೆರೆ, ಆ.21- ಕೊರೊನಾ ನಿಯಂತ್ರಣ ಹೆಸರಲ್ಲಿ ರಾಜ್ಯದಲ್ಲಾಗಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶ ರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ನಿನ್ನೆ ‘ಜನಧ್ವನಿ’ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯ ಬಿಜೆಪಿ ಸರ್ಕಾರದ ಕೊರೊನಾ ಭ್ರಷ್ಟಾ ಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತ ನಾಡಿ, ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣ ಸರ್ಕಾರ ಹಿಂಪಡೆಯಲಿ. ಕೊರೊನಾ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಮನುಕುಲವನ್ನೇ ಹೈರಾಣಾಗಿಸಿದ ಕೊರೊನಾ ವೈರಸ್ ನಿಯಂತ್ರಣದ ಹೆಸರಿನಲ್ಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಎಸಗಿದ್ದು, ಇದು ಆ ಪಕ್ಷದ ಸಂಸ್ಕೃತಿ, ಸಂಸ್ಕಾರ ತೋರಿಸುತ್ತದೆ. ಜನರು ವೈರಸ್ನಿಂದಾಗಿ ಸಾವು, ನೋವು ಅನುಭವಿಸುತ್ತಿದ್ದರೆ, ಸರ್ಕಾರವು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರವನ್ನೇ ಎಸಗಿದೆ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಇಡೀ ರಾಜ್ಯದಲ್ಲಿ ಆರೋಗ್ಯ ಸೇವೆ ಕುಸಿದು ಬಿದ್ದಿದೆ. ಕೊರೊನಾ ಬಾಧಿತ ರೋಗಿಗಳು ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇತರೆ ರೋಗಗಳಿಂದ ಬಾದಿತರಿಗೆ ಚಿಕಿತ್ಸೆ ಮಾತಿರಲಿ, ಪ್ರವೇಶವೂ ಸಿಗುತ್ತಿಲ್ಲ. ಕಷ್ಟಪಟ್ಟು ಆಸ್ಪತ್ರೆ ಸೇರಿದರೆ ಲಕ್ಷಾಂತರ ರೂ. ಚಿಕಿತ್ಸೆ ವೆಚ್ಚ ಭರಿಸಲಾಗದೇ ಪರಿತಪಿಸುತ್ತಿದ್ದಾರೆ ಎಂದು ದೂರಿದರು.
ಸ್ವತಃ ಆರೋಗ್ಯ ಸಚಿವರೇ ಹೇಳಿದಂತೆ ಕರ್ನಾಟಕವನ್ನು ದೇವರೇ ಕಾಪಾಡಬೇಕೆಂಬ ಮಾತು ಸರ್ಕಾರದ ಅಸಹಾಯಕತೆ, ವಸ್ತು ಸ್ಥಿತಿಯ ಗಂಭೀರತೆ ತೋರುತ್ತದೆ. ಕೋವಿಡ್ ನಿಯಂತ್ರಿಸಲು ಸಾಮಗ್ರಿ ಖರೀದಿಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸರ್ಕಾರವು ವಿವಿಧ 8 ಇಲಾಖೆಗಳಿಂದ ಈವರೆಗೆ 4167 ಕೋಟಿ ರೂ. ಬಡುಗಡೆ ಮಾಡಿದ್ದು, ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಮಾಡಲಾಗಿದೆ ಎಂದು ಅಪಾದಿಸಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರ, ತಮಿಳುನಾಡು, ತೆಲಂಗಾಣ ರಾಜ್ಯದಲ್ಲಿ ವೆಂಟಿಲೇಟರ್ ಗಳನ್ನು ಕೇವಲ 4 ಲಕ್ಷ ರೂ.ಗೆ ಖರೀದಿಸಿದರೆ, ರಾಜ್ಯದಲ್ಲಿ 5.6 ಲಕ್ಷದಿಂದ 18.8 ಲಕ್ಷ ರೂ.ವರೆಗೂ ಖರೀದಿ ಮಾಡಿದ್ದು, ಪಿಪಿಇ ಕಿಟ್ ಮಾರುಕಟ್ಟೆ ದರ 300 ರು. ಇದ್ದರೆ, 1444 ರು.ನಂದ 2049 ರು.ವರೆಗೆ ಅಧಿಕ ಹಣ ಕೊಟ್ಟು ಖರೀದಿಸಿದ್ದೇ ಭ್ರಷ್ಟಾಚಾರಕ್ಕೆ ಸಾಕ್ಷ್ಯಗಳಾಗಿವೆ ಎಂದು ಟೀಕಿಸಿದರು.
ಪಕ್ಷದ ಮುಖಂಡ ಪ್ರಕಾಶ ಪಾಟೀಲ್, ಜಿ.ಪಂ ಸದಸ್ಯ ಕೆ.ಎಚ್.ಓಬಳಪ್ಪ, ಅನಿತಾ ಬಾಯಿ, ಪಾಲಿಕೆ ವಿಪಕ್ಷ ನಾಯಕ ಎ. ನಾಗ ರಾಜ್, ಸದಸ್ಯರಾದ ದೇವರಮನಿ ಶಿವಕು ಮಾರ್, ಜಿ.ಎಸ್.ಮಂಜುನಾಥ್ ಗಡಿ ಗುಡಾಳ್, ಜೆ.ಎನ್.ಶ್ರೀನಿವಾಸ್, ಸೈಯದ್ ಚಾರ್ಲಿ, ಕೆ.ಚಮನ್ ಸಾಬ್, ಶಿವಲೀಲಾ ಕೊಟ್ರಯ್ಯ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಕೆ.ಎಲ್.ಹರೀಶ ಬಸಾಪುರ, ಬಾತಿ ಶಿವಕುಮಾರ, ಎಸ್.ಕೆ.ಪ್ರವೀಣಕುಮಾರ, ಚನ್ನಬಸಪ್ಪ, ಬಸವನಾಳ ಹಾಲೇಶ, ಮಹಮ್ಮದ್ ಜಿಕ್ರಿಯಾ, ಸುರೇಶ, ಅವಿನಾಶ, ಶಂಕರ್, ಅಣಜಿ ಅಂಜಿನಪ್ಪ, ರಂಗನಾಥ ಸ್ವಾಮಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿ. ರಾಕೇಶ್, ಯುವರಾಜ, ದಾದಾಪೀರ್, ಸುಷ್ಮಾ ಪಾಟೀಲ್, ಆಶಾರಾಣಿ ಮುರುಳಿ, ದಾಕ್ಷಾಯಣಮ್ಮ, ಮಂಜುಳಾ, ರಾಜೇಶ್ವರಿ, ಗೀತಾ ಚಂದ್ರಶೇಖರ, ವಿಜಯಲಕ್ಷ್ಮಿ, ಉಮಾ, ಕವಿತಾ, ಭಾಗ್ಯ, ದಿಲ್ಷಾದ್, ಸಂಗಮ್ಮ, ಜಯಶ್ರೀ, ಸೈಯದ್ ಖಾಲಿತ್, ಹರೀಶ ಕೆಂಗಲಹಳ್ಳಿ, ಇಬ್ರಾಹಿಂ ಖಲೀಲುಲ್ಲಾ, ಮೈನುದ್ದೀನ್, ಸದ್ದಾಂ, ರಾಘು ದೊಡ್ಡಮನಿ, ರಾಘವೇಂದ್ರ ಗೌಡ, ಲಿಯಾಖತ್ ಅಲಿ, ಆರೋಗ್ಯ ಸ್ವಾಮಿ, ಆನೆಕೊಂಡ ಲಿಂಗರಾಜ ಇತರರು ಇದ್ದರು.