ಗಣೇಶನ ಮೂರ್ತಿಗಳಿಗೆ ಹೆಚ್ಚಿದ್ದ ಬೇಡಿಕೆ, ಸಾರ್ವಜನಿಕ ಗಣಪತಿ ವಿರಳ
ಕೊರೊನಾ ಭಯದಲ್ಲೇ ಗಣೇಶನ ಸ್ವಾಗತಕ್ಕೆ ಸಜ್ಜಾದ ದೇವನಗರಿ
ದಾವಣಗೆರೆ, ಆ. 21- ಕೊರೊನಾ ವಿಘ್ನದಿಂದಾಗಿ ನಗರದಲ್ಲಿ ಗಣಪತಿ ಹಬ್ಬದ ಸಂಭ್ರಮ ತುಸು ಕ್ಷೀಣಿಸಿದೆ. ಸಾರ್ವಜನಿಕ ಗಣಪತಿಗಳ ಸಂಖ್ಯೆ ನಿರೀಕ್ಷೆಯಂತೆ ಇಳಿಮುಖವಾಗಿದೆ.
ಬೃಹತ್ ಪೆಂಡಾಲ್ ನಿರ್ಮಿಸಿ, ವಿವಿಧ ಬಗೆಯ ನೃತ್ಯ ರೂಪಕಗಳು, ವಿವಿಧ ಆಕೃತಿಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬದ ಕಳೆ ಹೆಚ್ಚಿಸುತ್ತಿದ್ದ ಸಂಘ ಸಂಸ್ಥೆಗಳು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸಲು ನಿರ್ಧರಿಸಿವೆ.
ಹಬ್ಬದ ಒಂದೆರಡು ವಾರಗಳ ಮುನ್ನವೇ ವಿನಾಯಕನ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಮನೆಗಳಲ್ಲಿ ನೆಂಟರಿಷ್ಟರನ್ನು ಆಹ್ವಾನಿಸಲಾಗುತ್ತಿತ್ತು. ಹಬ್ಬದ ಹಿಂದಿನ ದಿನವೇ ಸಂಬಂಧಿಗಳ ಗೃಹ ಪ್ರವೇಶದಿಂದಾಗಿ ಹಬ್ಬದ ಸಂಭ್ರಮ ಇಮ್ಮಡಿಸುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಗರದಲ್ಲಿ ನೆಂಟರಿಷ್ಟರ ಆಗಮನ ಕಡಿಮೆಯಾಗಿದೆ. ಕುಟುಂಬಸ್ಥರಷ್ಟೇ ಸೇರಿ ಹಬ್ಬ ಆಚರಿಸುವ ನಿರ್ಧಾರದಲ್ಲಿದ್ದಾರೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುತ್ತಿದ್ದ ಜಾಗದಲ್ಲಿ ಉತ್ಸವದ ಯಾವ ಕುರುಹೂಗಳೂ ಇರಲಿಲ್ಲ.
ಪ್ರತಿ ವರ್ಷವೂ ಬೀದಿ ಬದಿಗಳಲ್ಲಿ ನಾ ಮುಂದು, ತಾ ಮುಂದು ಎಂದು ಗಣೇಶನನ್ನು ಕೂರಿಸಲು ಮುಂದಾಗುತ್ತಿದ್ದ ಯುವಕರು ಕೊರೊನಾ ಭಯಕ್ಕಾಗಿ ಕೈ ಚೆಲ್ಲಿ ಕುಳಿತಿದ್ದಾರೆ.
ಮೂರ್ತಿಗಳ ಕೊರತೆ, ಹೆಚ್ಚಿದ ಬೇಡಿಕೆ : ನಗರದ ಮಂಡಿಪೇಟೆ, ಚಾಮರಾಜ ನಗರ, ಹೊಂಡದ ವೃತ್ತ, ಹದಡಿ ರಸ್ತೆ ಸೇರಿದಂತೆ ಹಲವು ಪ್ರಮುಖ ವೃತ್ತ ರಸ್ತೆಗಳಲ್ಲಿ ಗಣಪತಿ ಮೂರ್ತಿಗಳ ಮಾರಾಟದ ಭರಾಟೆ ಪ್ರತಿವರ್ಷ ಹೆಚ್ಚಾಗಿರುತ್ತಿತ್ತು. ಆದರೆ ಈ ಬಾರಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಮಾರಾಟಗಾರರು ಅಷ್ಟಾಗಿ ಬಾರದ ಕಾರಣ, ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿತ್ತು.
ಆರಂಭದಲ್ಲಿಯೇ ಕೊರೊನಾ ಕಂಟಕದಿಂದ ಚಿಂತೆಗೀಡಾಗಿದ್ದ ಮೂರ್ತಿ ತಯಾರಕರು ದೊಡ್ಡ ಗಾತ್ರದ ಮೂರ್ತಿಗಳ ನಿರ್ಮಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂರ್ನಾಕ್ಕು ಅಡಿಗಳ ಎತ್ತರದ ಗಣಪತಿ ಮೂರ್ತಿಗಳ ಸಂಖ್ಯೆ ತೀರಾ ವಿರಳವಾಗಿತ್ತು.
ದರ ಹೆಚ್ಚು: ಮನೆಯಲ್ಲಿ ಪ್ರತಿಷ್ಠಾಪಿಸುವಂತಹ ಒಂದು ಅಥವಾ ಒಂದೂವರೆ ಅಡಿ ಗಾತ್ರದ ಗಣಪತಿ ಮೂರ್ತಿಗಳನ್ನು 600 ರಿಂದ 800 ರೂ. ಬೆಲೆಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಜನರು ಚೌಕಾಸಿ ಮಾಡಿ ಖರೀದಿಸುತ್ತಿದ್ದುದು ಕಂಡು ಬಂತು.
ಹಣ್ಣು-ಹೂ ದುಬಾರಿ: ಶುಕ್ರವಾರ ಮಂಗಳಗೌರಿ ಪೂಜೆ ಹಾಗೂ ಶನಿವಾರ ಚತುರ್ಥಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇತ್ತು. ಪರಿಣಾಮ ಹೂ ಬೆಲೆ ದಿಢೀರ್ ಏರಿಕೆಯಾಗಿತ್ತು. ಹಣ್ಣುಗಳ ಬೆಲೆ ಏರಿಕೆಯ ನಡುವೆಯೂ ಅನಿವಾರ್ಯವಾಗಿ ಜನರು ಖರೀದಿಯಲ್ಲಿ ನಿರತರಾಗಿದ್ದರು.
ಪರಿಸರ ಸ್ನೇಹಿ ಗಣಪತಿಗೆ ಬೇಡಿಕೆ: ಕಳೆದ ನಾಲ್ಕೈದು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗೆ ಬೇಡಿಗೆ ಹೆಚ್ಚಾಗುತ್ತಿದೆ. ಈ ವರ್ಷವೂ ಸಹ ಬಣ್ಣ ಬಣ್ಣದ ಗಣಪತಿಗಳ ಜೊತೆ ಬಣ್ಣ ಹಚ್ಚದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾರಾಟಗಾರರು ತಂದಿದ್ದರು. ಈ ರೀತಿ ಮೂರ್ತಿಗಳ ಸಂಖ್ಯೆ ವಿರಳವಾಗುತ್ತಿದ್ದರಿಂದ ಮೊದಲೇ ಮುಂಗಡ ಕೊಟ್ಟು ಖರೀದಿಸುತ್ತಿದ್ದುದು ಕಂಡು ಬಂತು.