ಕಲಪನಹಳ್ಳಿಯಲ್ಲಿ ರುದ್ರಭೂಮಿ ವ್ಯವಸ್ಥೆಗೆ ಒತ್ತಾಯ
ದಾವಣಗೆರೆ,ಆ.23- ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದಿಂದ ನಾಳೆ ದಿನಾಂಕ 24ರ ಸೋಮವಾರ ಬೆಳಿಗ್ಗೆ 11.30ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಹುಟ್ಟುಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅಬ್ದುಲ್ ಜಬ್ಬಾರ್, ಡಿ.ಬಸವರಾಜ್, ಎ.ನಾಗರಾಜ್, ದೇವರಮನೆ ಶಿವಕುಮಾರ್, ದಿನೇಶ್ ಕೆ. ಶೆಟ್ಟಿ, ಅನಿತಾಬಾಯಿ ಮಾಲತೇಶ್, ಬಸವರಾಜ್ ಶಿವಗಂಗಾ ಮತ್ತಿತರರು ಆಗಮಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುಕ್ಕವಾಡ ಗ್ರಾಮದಲ್ಲಿ ರುದ್ರಭೂಮಿಯಲ್ಲಿ ಮಳೆಯ ನೀರು ಹರಿಯುತ್ತಿರುವ ಕಾರಣ ಶವ ಹೂಳಲು ಆಗುತ್ತಿಲ್ಲ.
ಜಿಲ್ಲಾಡಳಿತ ಶೀಘ್ರ ಮಣ್ಣು ಹಾಕಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಕಲ್ಪನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ರುದ್ರಭೂಮಿ ಇರುವುದಿಲ್ಲ. ಈ ಹಿಂದೆ ಕಲ್ಪನಹಳ್ಳಿ ಪಕ್ಕದ ಗೊಮಾಳದಲ್ಲಿ ಗ್ರಾಮಸ್ಥರು ಶವಗಳನ್ನು ಹೂಳುತ್ತಾ ಬಂದಿದ್ದರು. ಆದರೆ, ಅಕ್ಕಪಕ್ಕದ ಜಾಮೀನುದಾರರು ಒತ್ತುವರಿ ಮಾಡಿದ್ದು, ರುದ್ರಭೂಮಿಯನ್ನು ಗ್ರಾಮಸ್ಥರ ವಶಕ್ಕೆ ಕೊಟ್ಟಿರುವುದಿಲ್ಲ. ರುದ್ರಭೂಮಿ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಆಳ್ವಿಕೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಮತ್ತು ಕೊಲೆ ಹೆಚ್ಚಾಗಿದೆ. ಹೀಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ.
ದೌರ್ಜನ್ಯ ಆಗುವುದಕ್ಕೆ ಉತ್ತರ ಪ್ರದೇಶದ ಸರ್ಕಾರವೇ ಕಾರಣ. ಹಾಗಾಗಿ ಶೀಘ್ರ ಅವರ ಸರ್ಕಾರವನ್ನು ವಜಾ ಮಾಡಬೇಕು ಮತ್ತು ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಓಬಳಪ್ಪ, ಜಿ.ಡಿ. ಪ್ರಕಾಶ್, ಎಚ್. ಜಯಪ್ಪ, ಎಸ್. ಶೇಖರಪ್ಪ ಇದ್ದರು.