ಸಾಣೇಹಳ್ಳಿ, ಆ.30- ಕಲ್ಯಾಣ ಎನ್ನುವ ಶಬ್ದ ವಿಶಿಷ್ಟ ಪರಿಕಲ್ಪನೆಯಿಂದ ಕೂಡಿದೆ. ಕಲ್ಯಾಣ ಸಕಲ ಜೀವಾತ್ಮರ ಲೇಸನ್ನು ಬಯಸುವಂಥದ್ದು. ಇದನ್ನು ಸಾಕಾರಗೊಳಿಸುವಲ್ಲಿ ದೊಡ್ಡ ಕ್ರಾಂತಿಯೇ ಆಯಿತು ಎಂದು ಖ್ಯಾತ ಚಿಂತಕ, ಬಸವಾನುಯಾಯಿ ಬೆಂಗಳೂರಿನ ಡಾ. ಬಸವರಾಜ ಸಾದರ ತಿಳಿಸಿದರು.
ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ ‘ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯಲ್ಲಿ ಇಂದು ಏರ್ಪಾಡಾಗಿದ್ದ ‘ಶರಣ ಸಂದೇಶ – ಮಠಗಳ ಪಾತ್ರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರಾಂತಿಯನ್ನು ಒಡೆದ ಪ್ರಣತೆಯೆನ್ನುವ ರೂಪಕಕ್ಕೆ ಹೋಲಿಸಿ ಅದು ಒಡೆದು ಹೋಯಿತ್ತು, ಬತ್ತಿ ನಂದಿತ್ತು, ಎಣ್ಣೆ ಚೆಲ್ಲಿತ್ತು ಎಂದು ಶರಣರು ನೊಂದುಕೊಳ್ಳುವರು. ಈಗ 900 ವರ್ಷಗಳ ನಂತರ ಮತ್ತೆ ಆ ಪ್ರಣೆತೆಯನ್ನು ಜೋಡಿಸಿ, ಎಣ್ಣೆ, ಬತ್ತಿಗಳನ್ನು ಹಾಕಿ ಬೆಳಗಿಸುವ ಕಾರ್ಯವನ್ನು `ಮತ್ತೆ ಕಲ್ಯಾಣ’ ಅಭಿಯಾನ ಮಾಡುತ್ತಿದೆ. ಇದು ಕ್ರಾಂತಿಯ ಕನಸನ್ನು ನನಸು ಮಾಡಲು ಹೊರಟ ನಿತ್ಯ ಕಲ್ಯಾಣ ಕೂಡ ಕ್ರಾಂತಿ ಅಂದರೆ ಬದಲಾವಣೆ. ಕ್ರಮ ಕ್ರಮವಾಗಿ ಆಗುವಂಥದ್ದು, ನಿರಂತರ ಪ್ರವಾಹದ ರೀತಿಯಲ್ಲಿ ಇರುತ್ತದೆ. ಸೋಲು ಅದರ ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ಪರಿಣಾಮಗಳು ತಕ್ಷಣಕ್ಕೆ ಗೋಚರಿಸುವುದಿಲ್ಲ ಆದರೆ ಒಂದಿಲ್ಲೊಂದು ದಿನ ಕ್ರಾಂತಿಯ ಫಲ ಕೊಟ್ಟೇ ಕೊಡುತ್ತದೆ. ಈ ಕ್ರಾಂತಿಯ ಆಶಯಗಳನ್ನು ನಿತ್ಯ ಜೀವಂಥ ಇಟ್ಟುಕೊಂಡು ಬಂದ ವ್ಯಕ್ತಿ, ಸಂಸ್ಥೆ, ಮಠ ಮಾನ್ಯಗಳು ಅನೇಕ ಇವೆ. ಇದೇ ಉದ್ದೇಶಕ್ಕಾಗಿ ಕರ್ನಾಟಕದ ಅನೇಕ ಮಠಗಳು ಕೆಲಸ ಮಾಡುತ್ತಿವೆ. ಅವು ಬಸವಣ್ಣನ ಕನಸನ್ನು ನನಸು ಮಾಡುವ ನೆಲೆಯಲ್ಲಿ ನಿರಂತವಾಗಿ ದುಡಿಯುತ್ತಿವೆ.
ಮಠಗಳು ಎಲ್ಲರಿಗೂ ಸಮಾನ ಪ್ರವೇಶ ಕಲ್ಪಿಸಿವೆ. ಸಮನ್ವಯತೆ, ಸಹಬಾಳ್ವೆಯನ್ನು ಕಲಿಸಿವೆ. ಪೂಜೆ, ಪ್ರಸಾದ, ದಾಸೋಹ ಮುಂತಾದವುಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗಾಗಿಯೇ ಎಲ್ಲ ಜಾತಿ ಜಾನಾಂಗದವರೂ ಮಠಗಳಿಗೆ ನಡೆದುಕೊಳ್ಳುವರು. ಸಮನ್ವಯ ಸಿದ್ಧಾಂತವನ್ನು ಅಳವಡಿಸಿಕೊಂಡ ಕೆಲ ಮಠಗಳುಲ್ಲಿ ಕೊಡೆಕಲ್ ಬಸವೇಶ್ವರ, ಸಾವಳಗಿ ಶಿವಲಿಂಗೇಶ್ವರ, ಶಿರಹಟ್ಟಿ ಪಕ್ಕೀರೇಶ್ವರ ಮಠ ಮುಖ್ಯವಾದವು. ಇವು ಶರಣ ಪರಂಪರೆಯ ಜೊತೆಗೆ ಮುಸ್ಲಿಮ್ ಧರ್ಮವನ್ನೂ ಸಮನ್ವಯದ ಉಸಿರಾಗಿ ಆಚರಿಸುತ್ತಿವೆ. ಕಲ್ಬುರ್ಗಿಯಲ್ಲಿರುವ ಶರಣ ಬಸವೇಶ್ವರ ಸೂಫೀ ಸಂತರ ಬಂದೆ ನವಾಜ್ ತೇರನ್ನು ಎಳೆಯುವ ಮುನ್ನ ದರ್ಗಾಕ್ಕೆ ಹೋಗಿ ಮೊದಲ ಪೂಜೆ ಸಲಲಿಸಿ ತೇರನ್ನು ಎಳೆಯಲಾಗುವುದು. ಉರಸ್ ನಡಿಯುವಾಗ ಶರಣ ಬಸವವೇಶ್ವರ ಮಠಕ್ಕೆ ಬಂದು ಪೂಜೆಗೊಂಡ ನಂತರ ಉರಸ್ ಶುರವಾಗುತ್ತದೆ. ನವಗಲಗುಂದ ನಾಗಲಿಂಗ ಮಠದ ಅಜ್ಜನ ಮಠದಲ್ಲಿ ಬೈಬಲ್ ಇಂದಿಗೂ ಪೂಜೆಗೊಳ್ಳುತ್ತದೆ. ಅನ್ಯ ಧರ್ಮಿಯರನ್ನು ಅಪ್ಪಿಕೊಂಡ ಮಠಗಳು ಸಮಾಜದಲ್ಲಿ ಜಾತಿಯತೆಯನ್ನು ತೊಡೆಯುವಲ್ಲಿ ದೊಡ್ಡ ಕೆಲಸ ಮಾಡಿವೆ. ಇದು ಶರಣರು ಕಟ್ಟಿಕೊಟ್ಟ ಬಹುದೊಡ್ಡ ಆಶಯ.
ಶರಣರು ಆರ್ಥಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳು ಕಾಯಕ ಮತ್ತು ದಾಸೋಹ. ಈ ಪರಂಪರೆಯನ್ನು ಕರ್ನಾಟಕದ ಮಠಗಳು ಅನೂಚಾನವಾಗಿ ಜಾರಿಗೆ ತಂದಿವೆ. ಈಗಲೂ ಕೃಷಿ, ಉದ್ಯಮ, ವ್ಯಾಪಾರ ಕ್ಷೇತ್ರದಲ್ಲಿನ ಕಾಯಕದ ಫಲವಾಗಿ ಬರುವ ಒಂದು ಭಾಗವನ್ನು ಮಠಗಳಿಗೆ ಸಲ್ಲಿಸ್ತಾರೆ. ಅದನ್ನು ಪಡೆದ ಮಠಗಳು ಹಸಿದವರ ಹೊಟ್ಟೆಗೆ ಅನ್ನ ನೀಡುತ್ತವೆ. ಉತ್ತರ ಕರ್ನಾಟಕದಲ್ಲಿ ಮುರುಘಾ ಮಠ ಇಲ್ಲದೇ ಹೋದರೆ ಅನೇಕ ಶೂದ್ರ ವರ್ಗದವರ ಎದೆಗೆ ಅಕ್ಷರಗಳು ಬೀಳುತ್ತಿರಲಿಲ್ಲ. ಮಠಗಳು ಅನ್ನ, ಆಶ್ರಯ, ವಿದ್ಯೆಯನ್ನು ಧಾರೆಯೆರೆದವು. ಇದನ್ನು ಪಡೆದ ಲಕ್ಷಾಂತರ ಜನ ಬದುಕು ಕಟ್ಟಿಕೊಂಡಿದ್ದಾರೆ. ಇಂಥ ದಾಸೋಹ ಪರಂಪರೆ ಎಲ್ಲ ಮಠಗಳಲ್ಲೂ ಇದೆ. ದಾಸೋಹದ ವಿಚಾರದಲ್ಲಿ ಸಿದ್ಧಗಂಗಾ ಮಠ, ಸುತ್ತೂರು ಮಠಗಳು ಜಗತ್ತಿನಲ್ಲಿ ಅದ್ಭುತ ಕ್ರಾಂತಿಯ ಮಾಡಿದೆ. ದಾಸೋಹ ಕೇವಲ ಅನ್ನಕ್ಕೆ ಸೀಮಿತವಾಗದೆ ಅನ್ನ, ವಸತಿ, ಶಿಕ್ಷಣವನ್ನೂ ತಲುಪಿ ಇಡೀ ವ್ಯಕ್ತಿತ್ವವನ್ನೇ ಬೆಳೆಸಿವೆ.
ವಚನ ಸಾಹಿತ್ಯ, ಸಂಸ್ಕೃತಿ, ಸಂದೇಶಗಳನ್ನು ನಿರಂತರವಾಗಿ ತಮ್ಮ ಸಮ್ಮೇಳನಗಳು, ಶಿವಾನುಭವ ಗೋಷ್ಠಿ, ಚರ್ಚೆ, ಪುಸ್ತಕ ಪ್ರಕಟಣೆ, ಸಂಗೀತ, ಗಾಯನ, ಕೀರ್ತನೆ, ಚರ್ಚೆ, ರಂಗ ಚಟುವಟಿಕೆ ಮುಂತಾದವುಗಳ ಮೂಲಕ ನಿಂತರವಾಗಿ ಮುಂದುವರಿಸಿಕೊಂಡು ಬಂದಿವೆ. ಗುದುಗಿನ ತೋಂಟದಾರ್ಯ ಮಠ ಗ್ರಂಥ ಪ್ರಕಟಣೆಯಲ್ಲಿ ನಾಲ್ಕು ವಿಶ್ವವಿದ್ಯಾಲಯಗಳು ಮಾಡುವ ಕೆಲಸ ಮಾಡಿದೆ. ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಸ್ಥಾಪಿಸಿದೆ.
ಸಿರಿಗೆರೆ ಮಠದ ಶಿವಮೂರ್ತಿ ಶ್ರೀಗಳು 90 ರ ದಶಕದಲ್ಲಿ ಕಂಪ್ಯೂಟರ್ನಲ್ಲಿ ವಚನಗಳನ್ನು ಅಳವಡಿಸಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ನ್ಯಾಯದಾನದ ಮೂಲಕ ಹೈಕೋರ್ಟ್ಗಳಿಗೂ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸಾಣೇಹಳ್ಳಿಯಲ್ಲಿ ಮುಂದುವರೆದು ಶಿವಸಂಚಾರದ ಮೂಲಕ ರಂಗಕ್ಷೇತ್ರದಲ್ಲಿ ಭಾರತದಲ್ಲಿಯೇ ಅದ್ಭುತವಾದ ಕೆಲಸ ಮಾಡುತ್ತಿದೆ. ಭಾರತದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಹಿಂದಿ ಭಾಷೆಯಲ್ಲಿಯೂ ಸಂದೇಶ ಸಾರುತ್ತಿದೆ.
ಭಾಲ್ಕಿಯ ಶ್ರೀಮಠ ಗಡಿ ಪ್ರದೇಶವಾದ ಮರಾಠಿ, ತೆಲಗು ಪ್ರದೇಶಗಳಿಗೆ ಹೋಗಿ ಪ್ರಚಾರ ಮಾಡುತ್ತಿದೆ.ಇಳಕಲ್ ಮಹಂತಪ್ಪಗಳು ಜೋಳಿಗೆ ಹಿಡಿದು ದುಶ್ಚಟಗಳ ನಿವಾರಣಗೆಗಾಗಿ ಶ್ರಮಿಸಿದ್ದಾರೆ. ಸುತ್ತೂರು ಮಠ ವೃದ್ಧರಿಗಾಗಿ, ವಿಕಲಚೇತನರಾಗಿ, ಮಹಿಳೆಯರಿಗೆ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಢಿದ ಸಾಧನೆ, ವಿವಿಗಳು ಮಾಡಲಾರದ ಸಾಧನೆ. ತೊಂಟದಾರ್ಯ, ಕೊಪ್ಪಳ, ಭಾಲ್ಕಿ ಮುಂತಾದ ಮಠಗಳು. ಬಾಲವಾಡಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಶಿಕ್ಷಣ ನೀಡುತ್ತಿವೆ. ಪರಿಸರ ಸಂರಕ್ಷಣೆಗಾಗಿ ಕಪ್ಪತಗುಡ್ಡದ ಮಠ ಗಣಿಗಾರಿಕೆಯನ್ನು ವಿರೋಧಿಸಿ ಚಳುವಳಿಯನ್ನು ಮಾಡಿತು. ಸುತ್ತೂರು ಮಠ `ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತುನ್ನು’ ಸ್ಥಾಪಿಸಿ ಎಲ್ಲ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿ ನಿರಂತರ ಶರಣ ಸಂದೇಶ ಪ್ರಸಾರ ಮಾಡುತ್ತಿದೆ. ಮಾತೆ ಮಹಾದೇವಿಯವರ ಸಾಧನೆಯೂ ಕಡಿಮೆಯಲ್ಲ. ಶರಣ ಸಾಹಿತ್ಯವನ್ನು ನಾಡಿನ ಉದ್ದಕ್ಕೂ ತಲೆಯ ಮೇಲೆ ಹೊತ್ತು ಪ್ರಚಾರ ಮಾಡಿದರು. ಶರಣ ಪರಂಪರೆಯ ಮಠಗಳು ಕ್ರಿಯಾತ್ಮಕವಾಗಿ ಆಚರಿಸುತ್ತ ಬಂದಿವೆ. ಆತ್ಮಸಾಕ್ಷಿ ಪ್ರಜ್ಞೆಯಿಂದ ಆಚರಿಸುತ್ತ ಮುಂದಿನ ಜನಾಂಗಕ್ಕೆ ತಲುಪಿಸುತ್ತಿವೆ.
ಕೆಲವು ಮಠಗಳು ಶರಣ ಸಂದೇಶದ ವ್ಯತಿರಿಕ್ತವಾಗಿಯೂ ನಡೆದುಕೊಂಡಿವೆ. ಮಾನವ ಕುಲವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ ಶರಣರ ಆಶಯಕ್ಕೆ ವಿರುದ್ಧವಾಗಿ ಜಾತಿ ಮಠಗಳನ್ನು ನಿರ್ಮಿಸುವುದು ಬಸವ ವಿರೋಧಿ ಕೆಲಸ. ಹಿಂದುಳಿದ ಆ ಜನಾಂಗವನ್ನು ಉದ್ದರಿಸುವ ನಿಜವಾದ ಕಾಳಜಿಯಿದ್ದರೆ ತಮ್ಮ ಪೀಠವನ್ನು ತ್ಯಜಿಸಿ ಆ ಜನಾಂಗದ ನಿಷ್ಠಾವಂತ ವ್ಯಕ್ತಿಗಳನ್ನು ಕೂಡಿಸಿದರೆ ಅವರ ಪ್ರಯತ್ನ ಸಫಲವಾಗುವುದು.
ಮಠಗಳು ರಾಜಕೀಯ ಆಶ್ರಯ ಪಡೆಯುತ್ತಿರುವುದು ಸರಿಯಲ್ಲ. ಮಠಗಳು ರಾಜಕಾರಣ ಮಾಡುವ ಅಗತ್ಯವಿಲ್ಲ. ರಾಜಕಾರಣಿಗಳು ಬೇಕಾದರೆ ಮಠಗಳಿಗೆ ಬರಲಿ. ಮಠ-ಮಠಾಧೀಶ್ವರರಲ್ಲಿ ಆಂತರಿಕವಾಗಿ ಸಮನ್ವಯದ ಕೊರತೆ ಇದೆ. `ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ’ ಎಂದು ಬಸವಣ್ಣ ಹೇಳಿದಂತೆ ಎಲ್ಲರಲ್ಲಿಯೂ ಸಮನ್ವಯ ಬೇಕು. ಆಗ ಶರಣ ಸಂದೇಶ ಸಾರುವಲ್ಲಿ ಹೆಚ್ಚಿನ ಕೆಲಸ ಮಾಡಬಹುದು. ಪೀಠಾಧಿಪತಿ ಸ್ಥಾನಕ್ಕಾಗಿ ಜಗಳಗಳಾಗಿ ಕೋರ್ಟಿನವರೆಗೆ ಹೋಗುತ್ತಿವೆ. ಇದು ಶರಣರ ಸೇವಾ ಕಾರ್ಯಕ್ಕೆ ವಿರುದ್ಧವಾದುದು. ಮಠಗಳು ಜ್ಞಾನದಲ್ಲಿ ಅರಿದಡೇನು ಕ್ರಿಯೆಯಲ್ಲಿ ಮೊದಲು ತರಬೇಕು ಆಗ ಮಾದರಿಯಾಗುವವು. ಮಠಗ-ಮಠಗಳ ಮಧ್ಯೆ ಸಮನ್ವಯ ಸಮಿತಿ ರಚನೆಯಾಗಬೇಕು. ಎಲ್ಲ ಧರ್ಮ, ಜಾತಿ, ಮತದವರಿಗೂ ತಲುಪುವಂತೆ ಮಠಗಳು ವಚನ ಪಾಠಶಾಲೆಗಳು ಆರಂಭಿಸಬೇಕು. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ದೇಶ-ವಿದೇಶಗಳಿಗೆ ತಲುಪುವಂತೆ ಪ್ರಚಾರ ಮಾಡಬೇಕು.
`ಮತ್ತೆ ಕಲ್ಯಾಣ ಅಭಿಯಾನ’ ಕರ್ನಾಟಕ ಚರಿತ್ರೆಯಲ್ಲಿ ಅಭೂತಪೂರ್ವವಾದುದು. ಎಲ್ಲರ ಜೊತೆಗೆ ಬೆರೆತು, ಪಾದಯಾತ್ರೆ, ಸಮಾರಂಭ, ನಾಟಕ, ವಿದ್ಯಾರ್ಥಿಗಳೊಂದಿಗೆ ಸಂವಾದಗಳ ಮೂಲಕ ಸಮನ್ವಯದ ಸತ್ವವನ್ನು ಕಲಿಸಿತು. ಅನುಭವ ಮಂಟಪದಲ್ಲಿ ಮಾದರಿಯಲ್ಲಿ ನಡೆಯಿತು. ಅದೆಲ್ಲವೂ ಗ್ರಂಥರೂಪದಲ್ಲಿ ಪ್ರಕಟಮಾಡಿ ಜಂಗಮ ಅನುಭವ ಮಂಟಪವಾಗಿ ಕೆಲಸ ಮಾಡಿದ್ದನ್ನು ದಾಖಲೀಕರಣಗೊಳಿಸಿರುವುದು ಅದ್ಭುತ ಸಾಧನೆ ಎಂದರು.