ಸಾಣೇಹಳ್ಳಿ, ಆ.30- ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲಿ ಪ್ರಖ್ಯಾತ ಮಠಗಳು ಶರಣರ ಸಂದೇಶದಂತೆ ನಡೆದುಕೊಂಡು ಭಕ್ತರ ಬದುಕನ್ನು ಹಸನು ಮಾಡುವ ಕಾಯಕವನ್ನು ನಿಷ್ಯೃಹತೆಯಿಂದಲೇ ಮಾಡುತ್ತಾ ಬಂದಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ತರಳಬಾಳು ಬೃಹನ್ಮಠದ ಸಾಣೇಹಳ್ಳಿ ಶಾಖಾಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯಲ್ಲಿ ಇಂದು ಏರ್ಪಾಡಾಗಿದ್ದ `ಶರಣ ಸಂದೇಶ – ಮಠಗಳ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳು ಆಶೀರ್ವಚನ ನೀಡಿದರು.
ಕ್ರಮೇಣವಾಗಿ ಕೆಲವು ಮಠಗಳು ತಮ್ಮ ಆಸ್ತಿ, ಆದಾಯ ಹೆಚ್ಚಿಸಿಕೊಳ್ಳುತ್ತಾ, ಅಲ್ಲಿನ ಸ್ವಾಮಿಗಳೂ ಸಹ ಒಂದು ರೀತಿಯ ಬಂಡವಾಳ ಶಾಹಿಗಳಂತೆ ವ್ಯವಹರಿಸುತ್ತಿರುವುದು ತೆರೆದ ಸತ್ಯ ಎಂದರು.
ಕೆಲವು ಮಠಗಳು, ಧರ್ಮ ಪ್ರಸಾರ, ಜನ ಜಾಗೃತಿಯನ್ನು ಗೌಣವಾಗಿಸಿ, ವ್ಯಾಪಾರಿ ಮನೋಭಾವನೆ ಬೆಳೆಸಿಕೊಳ್ಳುತ್ತಲಿವೆ. ಇನ್ನೂ ಕೆಲ ಮಠಗಳು, ರಾಜಕೀಯ ಗೂಢಾಚಾರರಂತೆ ವರ್ತಿಸುತ್ತಿವೆ ಎಂಬುದು ಭಕ್ತರ ಅಭಿಪ್ರಾಯ ಎಂದು ಹೇಳಿದರು. ಮಠಗಳಿಗೆ ಜಾತಿ ಕಾಲಿಡದಂತೆ, ಮೌಢ್ಯಕ್ಕೆ ಅವಕಾಶವಿಲ್ಲದಂತೆ, ಸ್ಥಾವರ ಪೂಜೆ ನಡೆಯದಂತೆ ಮಾಡಿ, ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವ ಸಂಕಲ್ಪ ತೊಡಬೇಕೆಂದು ಕರೆ ನೀಡಿದರು.
ಶರಣ ಸಂದೇಶಗಳನ್ನು ಆಚರಣೆ ತರುವಂತಹ ಪ್ರಾಯೋಗಿಕ ತರಬೇತಿಯನ್ನು ಇಂದಿನ ಯುವ ಜನಾಂಗಕ್ಕೆ ನೀಡುವ ಅಗತ್ಯವಿದೆ ಎಂದರು.
ಬಡವ, ಬಲ್ಲಿದ ಎನ್ನದೇ, ಶಿಷ್ಯರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಗುರುತರ ಜವಾಬ್ದಾರಿ ಮಠಗಳದ್ದು. ಭಕ್ತನೊಬ್ಬ ತಪ್ಪು ಮಾಡಿದಾಗ ಶ್ರೀಮಂತನೋ, ಅಧಿಕಾರಿಯೋ, ಜನಪ್ರತಿನಿಧಿಯೇ ಆಗಿದ್ದಾನೆಂದು ಮೌನವಾಗಿರದೆ, ತಪ್ಪುಗಳನ್ನು ತಿದ್ದಿ ಮುನ್ನಡೆಸಬೇಕೆಂದರು.
ತಳಸಮುದಾಯದ ಜನರು, ಕುಡಿತ ಮತ್ತಿತರೆ ದುರ ಭ್ಯಾಸಗಳ ದಾಸರಾಗಿ, ಜೀವನ ಹಾಳು ಮಾಡಿಕೊಳ್ಳು ತ್ತಿದ್ದಾರೆ ಎನ್ನುವ ಕಾಲ ಬದಲಾಗಿ ಇದೀಗ ಎಲ್ಲಾ ವರ್ಗದ ಜನರೂ ಕುಡಿತದಂತಹ ದುಶ್ಚಟಗಳಿಗೆ ಬಲಿಯಾಗಿದ್ದಾರೆ. ದುಶ್ಚಟ ನಿರ್ಮೂಲನೆಗೆ ರಾಜ್ಯದ ಮಠಾಧೀಶರು ಸಂಘ ಟಿತರಾಗಿ ಸರ್ಕಾರದ ಮೇಲೆ ಒತ್ತಡ ತಂದು `ಮದ್ಯಮುಕ್ತ’ ಕರ್ನಾಟಕ ಮಾಡಬೇಕು ಎಂದು ಶ್ರೀಗಳು ಹಿತ ನುಡಿದರು.