ದಾವಣಗೆರೆ, ಆ.20- ನಾಡಿದ್ದು ದಿನಾಂಕ 22 ರಂದು ಆಚರಿಸಲಿರುವ ಗಣೇಶ ಚತುರ್ಥಿಯನ್ನು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಗಣೇಶ ಮೂರ್ತಿ ತಯಾರಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಅನುಸರಣಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮಹಾನಗರ ಪಾಲಿಕೆ ಕರೆ ನೀಡಿದೆ.
ಗಣೇಶ ಮೂರ್ತಿಗಳನ್ನು ಜೇಡಿ ಮಣ್ಣಿನಿಂದ ತಯಾರಿಸಿ, ಬಣ್ಣ ರಹಿತ ಅಥವಾ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುವುದು. ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ಮಹಾನಗರ ಪಾಲಿಕೆ ಕಾಯ್ದೆ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು. ಅಲ್ಲದೇ, 10,000 ರೂ.ಗಳ ದಂಡ ವಿಧಿಸಲಾಗುವುದು ಎಂದು ನಗರಪಾಲಿಕೆ ಎಚ್ಚರಿಸಿದೆ.
ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಬಾರದೆಂದು ಸೂಚಿಸಲಾಗಿದೆ. ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸಬಾರದು. ಈ ಮೂಲಕ ಪರಿಸರ ಹಿತರಕ್ಷಣೆಗಾಗಿ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ವಿನಂತಿಸಿದೆ.