ಬ್ರೋ ಏನಿದು!? ಮಾರ್ಚ್ ತಿಂಗಳಿನಿಂದ ನಮ್ಮ ಸುತ್ತ ಮುತ್ತ ಕೋವಿಡ್ ಸುರಿಮಳೆ ಈಗ ಎಲ್ಲೆಲ್ಲೂ ಮಳೆ.. ಮಳೆ… ಮಳೆ!
ಹೌದು ಬ್ರದರ್, ಕೊರೊನಾವೃತ ಜೊತೆಗೆ ಜಲಾವೃತ. ಎಲ್ಲೆಲ್ಲೂ ನೀರು. ಈಗ ಗಣ್ಯರಲ್ಲೂ ಕೋವಿಡ್ ಜೋರು. ಮುಖ್ಯ ಮಂತ್ರಿ, ವಿರೋಧ ಪಕ್ಷದ ನಾಯಕ, ಹಾಲಿ ಮತ್ತು ಮಾಜಿ ಶಾಸಕ, ಪೋಲಿಸ್ ಅಧಿಕಾರಿಗಳು ಈಗ ಆರೋಗ್ಯ ಮಂತ್ರಿ ಕೂಡ ಯಾರನ್ನೂ ಬಿಡ್ತಾ ಇಲ್ಲ. ಈ ಟ್ವೆಂಟಿ ಟ್ವೆಂಟಿ ಮೇಲಿಂದ ಮೇಲೆ ತೊಂದರೆಗಳ ಸಿಕ್ಸರ್ ಸಿಡಿಸ್ತಾನೇ ಇದೆ.
ಈ ಮಳೆ ಏನೋ ಹೊಡೆಯೋ ಅಷ್ಟು ಹೊಡೆದು ಆಮೇಲೆ ಕಡಿಮೆ ಆಗಬಹುದು. ಪ್ರವಾಹ ಸ್ವಲ್ಪ ದಿನಗಳಲ್ಲಿ ಸ್ಲೋ ಆಗಬಹುದು. ಆದರೆ, ಈ ಕೋವಿಡ್ ಫ್ಲೋ ಕಡಿಮೆ ಆಗೋದು ಡೌಟು. ಯಾವಾಗ ಆಗುತ್ತೋ ಇದು ಔಟು. ಆದಷ್ಟು ಬೇಗ ಕೋವಿಡ್ ಕೊನೇಗಾಣಿಸೋದಿಕ್ಕೆ ಒಂದು ರಾಮ ಬಾಣ ಕಂಡು ಹಿಡಿಯಲೇ ಬೇಕು.
ರಾಮ ರಾಮಾ! ಶ್ರೀ ರಾಮನ ಜನ್ಮ ಸ್ಥಳಕ್ಕೇ ಕ್ಲೀಯರೆನ್ಸ್ ಸಿಗೋಕ್ಕೆ ಐದು ನೂರು ವರ್ಷ ಬೇಕಾಯ್ತು. ಇನ್ನೂ ಕೋವಿಡ್ ಕ್ಲಿಯರೆನ್ಸ್ ಸಿಗೋಕೆ ಎಷ್ಟು ವರ್ಷ ಬೇಕಾಗಬಹುದು?
ನೋಡು ಬ್ರದರ್ ರಾಮ ಜನ್ಮ ಭೂಮಿ ವಿವಾದ ಮನುಷ್ಯರು ಸೃಷ್ಟಿ ಮಾಡಿಕೊಂಡಿದ್ದು. ಈ ಕೊರೊನಾ ಹಾವಳಿಯನ್ನು ತಡೆಯೋಕೆ ಭೂಮಿ ಮೇಲಿನ ಎಲ್ಲ ಮನುಷ್ಯರು ಪ್ರಯತ್ನ ಮಾಡ್ತಿದ್ದಾರೆ. ಇದು ಧರ್ಮದ ವಿಷಯ ಅಲ್ಲ ನಮಗೆ ಬಂದಿರೋ ಕರ್ಮದ ವಿಷಯ.
ಅದು ನಿಜ. ಕೊರೊನಾ ನಿರ್ನಾಮ ಆಗಲಿ ಅಂತಾ ಎಲ್ಲಾ ಧರ್ಮದವರು ಅವರವರ ದೇವರುಗಳಿಗೆ ಪ್ರಾರ್ಥನೆ ಮಾಡಬೇಕು.
ಎಲ್ಲರೂ ಪ್ರಾರ್ಥನೆ ಮಾಡಿದರೇ ಕೊರೊನಾ ನಿರ್ನಾಮ ಆಗುತ್ತೆ ಅಂತಿಯಾ?
ಗುರೂ, ಕೇವಲ ಪ್ರಾರ್ಥನೆ ಮಾಡಿದರೆ ಆಗೋಲ್ಲ. ಪ್ರಯತ್ನದಿಂದ ಇದು ಆಗಬೇಕು. ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನ ….ಅದು ಸಕ್ಸಸ್ ಆಗೋವರೆಗೂ ಕೋವಿಡ್ ಹರಡದಂತೆ ನಮ್ಮೆಲ್ಲರ ಪ್ರಯತ್ನ.. ಹೀಗೆ. ಇದೆಲ್ಲಾ ಯಶಸ್ವಿಯಾಗಲಿ ಅಂತಾ ನಾವೆಲ್ಲಾ ದೇವರಿಗೆ ಪ್ರಾರ್ಥನೆ ಮಾಡಬೇಕು.
ಅಲ್ಲಾ ಬಾಸು, ದೇವರು ಅಂದರೆ ಸಿಕ್ಕಾ ಪಟ್ಟೆ ಅಸ್ತ್ರ ಇರುತ್ತೆ. ಜೊತೆಗೆ ಮಾಯಾವಿ, ಈ ಕೊರೊನಾಗೆ ದೇವರೇ ಯಾವುದಾದರೂ ಶಾಪ ಹಾಕಿ ನಿರ್ನಾಮ ಮಾಡಬಹುದಲ್ಲ.
ನೋಡು ತಮ್ಮಾ , ಎಲ್ಲಾನೂ ದೇವರೇ ಮಾಡಿಬಿಟ್ಟರೆ ಮನುಷ್ಯ ಇನ್ನೂ ಸೋಮಾರಿ ಆಗಿ ಬಿಡ್ತಾನೆ. ಏನೇ ತೊಂದರೆ ಬಂದರೂ ತಾನು ಪ್ರಯತ್ನ ಮಾಡೋದು ಬಿಟ್ಟು ದೇವರೇ ಮಾಡಲಿ ಅಂತಾ ಓನ್ಲೀ ಪೂಜೆ, ಪ್ರಾರ್ಥನೆ ಮಾಡ್ತಾ ಕುಂತು ಬಿಡ್ತಾನೆ. ಅದಕ್ಕೆ ನಾವು ಪ್ರಯತ್ನ ಮಾಡೋಕೆ, ನಮ್ಮಲ್ಲಿ ವಿಶ್ವಾಸ, ಶಕ್ತಿ ತುಂಬೋಕೆ ದೇವರನ್ನು ಪಾರ್ಥಿಸಬೇಕು.
ಸರಿ, ಕ್ರೈಸ್ತರು ಜೀಸಸ್ ಗೆ ಪ್ರೇ ಮಾಡ್ತಾರೆ. ಮುಸ್ಲೀಮರು ಅಲ್ಲಾಹುಗೆ ನಮಾಜ್ ಮಾಡ್ತಾರೆ. ಮತ್ತೆ ಹಿಂದೂಗಳು ಯಾರಿಗೆ?
ಈಗ ರಾಮ ನಾಮ ಜಪ ಮಾಡಬೇಕು.
ಹೇಗೆ?
ನೋಡಪಾ, ಶ್ರೀ ರಾಮನಿಗೆ ಮೋಸ್ಟ್ ವ್ಯಾಲ್ಯುಯೇಬಲ್ ಭಕ್ತ ಅಂದರೇ ಮಹಾತ್ಮ ಗಾಂಧೀಜಿ. ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರು. ಎಲ್ಲರೂ ಒಂದಾಗಿ ಬಾಳೋಣ ಎಂದು ಕರೆ ನೀಡಿ ಯೂನಿಟಿ ತರೋದಿಕ್ಕೆ ಪ್ರಯತ್ನ ಮಾಡಿದ್ರು. ಆದರೆ, ಜನ ಸೌಹಾರ್ದತೆಯಿಂದ ಇರದೇ ಗಲಭೆ ಎಬ್ಬಿಸಿದರು. ಕೊನೆಗೆ ಬಾಪೂಜಿ ಗುಂಡೇಟಿಗೆ ಬಲಿಯಾದರು. ಈ ಜನಕ್ಕೆ ಬುದ್ಧಿ ಕೊಡಪ್ಪಾ ಎಂದು ಪ್ರಾಣ ಬಿಟ್ಟ ಬಾಪು ಕೊನೆಗೆ ಉದ್ಗರಿಸಿದ್ದು `ಹೇ ರಾಮ್’.
ಹೌದು.
ಈಗ ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ಹೊಸ ರೂಪ ಪಡಿತಾ ಇದೆ. ಶ್ರೀ ರಾಮನ ಹೊಸ ರೀತಿಯ ಎಂಟ್ರಿ ಆಗ್ತಾ ಇರೋದರಿಂದ ಕೋವಿಡ್ ಓಡಿಸಲು ನಾವು ಮಾಡರ್ನ್ ಆಗಿ ರಾಮನನ್ನು ಹೀಗೆ ಜಪಿಸಿದರೆ ಚೆನ್ನಾಗಿರುತ್ತೆ.
ಏನಂತಾ?
ಹಾಯ್ ರಾಮ್!
ಆರ್.ಟಿ. ಅರುಣ್‌ಕುಮಾರ್
[email protected]