ಹರಿಹರ, ಆ.19- ಕೃಷಿ ಇಲಾಖೆ ಇತ್ತೀಚಿಗೆ ಹೊರಡಿಸಿದ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮುಖಾಂತರ ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸಮೀಕ್ಷೆ ಆಪ್‌ನಲ್ಲಿ ನೋಂದಣಿ ಮಾಡಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ಮತ್ತು ಕಂದಾಯ ಇಲಾಖೆಯಿಂದ ಸೂಚಿತಗೊಂಡಿರುವ ಖಾಸಗಿ ನಿವಾಸಿಗಳು ಮತ್ತು ಇಲಾಖಾ ಸಿಬ್ಬಂದಿಗಳು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಳಕೆ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡುತ್ತಿದ್ದು, ಯಾವುದೇ ಗೊಂದಲವಿದ್ದಲ್ಲಿ ಖಾಸಗಿ ನಿವಾಸಿ ಮತ್ತು ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.
ಗಂಗನರಸಿ, ಹೊಟ್ಟಿಗನಹಳ್ಳಿ ಗ್ರಾಮಗಳಲ್ಲಿ ರೈತರು ಸ್ವತಃ ಮೊಬೈಲ್ ಆಪ್ ಮುಖಾಂತರ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿಯಾಗಿ ತಾಲ್ಲೂಕಿನ ಎಲ್ಲಾ ಗ್ರಾಮದ ರೈತರು ತಾವೇ ಬೆಳೆ ಸಮೀಕ್ಷೆ ಮಾಡಿಕೊಂಡು ನಿಖರವಾದ ಮಾಹಿತಿಯನ್ನು ನೀಡುವುದರಿಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.
ಬೆಳೆ ಸಮೀಕ್ಷೆ ಮಾಹಿತಿ ಆಧರಿಸಿ ಬೆಳೆ ಕಟಾವು ಪ್ರಯೋಗ, ನೈಸರ್ಗಿಕ ಪ್ರಕೃತಿ ವಿಕೋಪ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ, ಕನಿಷ್ಟ ಬೆಂಬಲ ಬೆಲೆ ಸೌಲಭ್ಯ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖಾ ಯೋಜನೆಗಳ ಫಲಾನುಭವಿಯಾಗಲು ಅರ್ಹತೆ ಮತ್ತು ಪಹಣಿಯಲ್ಲಿ ಬೆಳೆ ವಿವರ ದಾಖಲೆ ಇತ್ಯಾದಿಗಳಿಗೆ ಬೆಳೆ ಸಮೀಕ್ಷೆ ಖಡ್ಡಾಯವಾಗಿರುತ್ತದೆ. ಇದೇ ದಿನಾಂಕ 24 ರೊಳಗೆ ರೈತರೇ ಸ್ವತಃ ಬೆಳೆ ಸಮೀಕ್ಷೆ ಕೈಗೊಳ್ಳಬಹುದು.
ತದ ನಂತರ ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಕಾರ್ಯ ನಡೆಸಲಾಗುವುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೂಲಕ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.