ಕೃಷ್ಣನ ಆದರ್ಶ ಹಾಗೂ ತತ್ವಗಳು ಇಂದಿಗೂ ಪ್ರಸ್ತುತ

ದಾವಣಗೆರೆ, ಆ.18- ನಗರದ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀತಮಿ ದೀಪಾ ಜಗದೀಶ್ ಮಾತನಾಡಿ, ಭಾರತದ ಪುರಾಣಗಳಲ್ಲಿ ಕೃಷ್ಣ ಹಾಗೂ ರಾಮ ಇಬ್ಬರೂ ಬಹಳ ಶ್ರೇಷ್ಟ ವ್ಯಕ್ತಿತ್ವ ಹೊಂದಿದವರು. ಕೃಷ್ಣನ ಆದರ್ಶ ಹಾಗೂ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋದಲ್ಲಿ ಬದುಕು ಹಸನಾಗುತ್ತದೆ ಎಂದರು.

ಜಿಲ್ಲಾ ಯಾದವ ಸಮುದಾಯದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ದೇವರನ್ನು ಕೂಡ ದೂರ ಇಡುವಂತಹ ಪರಿಸ್ಥಿತಿ ಎದುರಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಭಗವಂತನ ಸ್ಮರಣೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಗಿರೀಶ್, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ ಕುಮಾರ್, ಜಿಲ್ಲಾ ಯಾದವ ಸಮುದಾಯದ ಕಾರ್ಯದರ್ಶಿ ಗಂಗಾಧರಪ್ಪ ಹಾಗೂ ಉಪಾಧ್ಯಕ್ಷ ಕೆಂಚವೀರಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!