ದಾವಣಗೆರೆ, ಆ.18- ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆ ನೆಪದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಗೂಂಡಾಗಿರಿ ಮಾಡಿದ ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದ ಬಳಿ ಜಮಾಯಿಸಿದ್ದ ಸೇನೆ ಕಾರ್ಯಕರ್ತರು, ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ಕೆ.ಎನ್. ವೆಂಕಟೇಶ್, ಬೆಳಗಾವಿ ಜಿಲ್ಲೆ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ನೆಪದಲ್ಲಿ ಕನ್ನಡಿಗರ ಮೇಲೆ ಶಿವಸೇನೆಯವರು ಪುಂಡಾಟಿಕೆ ಮಾಡುತ್ತಿದ್ದು, ಕನ್ನಡಿಗರ ಸ್ವಾಭಿಮಾನದ ನೆಲವಾದ ಬೆಳಗಾವಿಯಲ್ಲಿ ಶಿವಾಜಿ ಹೆಸರಿನಲ್ಲಿ ಶಿವಸೇನೆ ಪುಂಡರು ಪದೇ ಪದೇ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು, ಕನ್ನಡಿಗರನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೇನೆ ಜಿಲ್ಲಾ ಉಪಾಧ್ಯಕ್ಷ ಶೇರ್ ಅಲಿ ಮಾತನಾಡಿ, ಶಿವಸೇನೆ ಸಂಘಟನೆಯ ಪುಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ರಾಘವೇಂದ್ರ, ಕೆ.ಎನ್.ರಮೇಶ, ಸೈಯದ್ ಆರೀಫ್, ಪ್ರಸನ್ನ, ಅಯಾಜ್ ಖಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.