ಗಣೇಶೋತ್ಸವ ಮೌಲ್ಯ ಕಳೆದುಕೊಳ್ಳಬಾರದು

ವಿಶ್ವವೇ ಕೊರೊನಾ ಸಂಕಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ವಿಷಮ ಪರಿಸ್ಥಿತಿಯಲ್ಲಿ, ಗಣೇಶ ಉತ್ಸವ ಆಚರಿಸುವ ಸಂಭ್ರಮದಲ್ಲಿರುವ ನಾವು ಗಣೇಶೋತ್ಸವದ ಅರ್ಥ ಹಾಗೂ ಮಹತ್ವ ಅರಿಯುವುದು ಅತ್ಯವಶ್ಯಕ. ಜನತೆಯು ಅವರವರ ಮನೆಯಲ್ಲಿ ಗಣೇಶೋತ್ಸವ ಆಚರಿಸುವಂತೆ ಸರ್ಕಾರ ತಿಳಿಸಿದೆ. ಆದರೆ, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಾರ್ವಜನಿಕವಾಗಿ ಕೇರಿ ಕೇರಿಗೆ, ಊರು ಊರಿಗೆ, ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಕೇಳುತ್ತಿದ್ದಾರೆ. ಕೊರೊನಾ ಸಮಸ್ಯೆಯ ಸಂದರ್ಭದಲ್ಲಿ ನಾವು ಯಾವ ರೀತಿಯಾಗಿ ಗಣೇಶೋತ್ಸವ ಆಚರಿಸಿದರೆ, ಉತ್ತಮ ಎಂಬುದನ್ನು ಅರಿತು ನಾವು ಗಣೇಶೋತ್ಸವ ಆಚರಿಸೋಣ.

ಸುಮಾರು ವರ್ಷಗಳ ಹಿಂದೆ ಸಾಮಾಜಿಕ ಸಂಘಟನೆಯ ದೂರ ದೃಷ್ಟಿಯಲ್ಲಿರಿಸಿಕೊಂಡು ಸಾರ್ವಜನಿಕ ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಪುಣೆಯಲ್ಲಿ ಪ್ರಾರಂಭಿಸಿದರು. ಅವರ ಕನಸಿನಂತೆ ಈ ಸಾರ್ವಜನಿಕ ಗಣೇಶೋತ್ಸವ ಬಹಳ ಪರಿಣಾಮ ಬೀರಿತು.

ಹಳ್ಳಿ ಪಟ್ಟಣ ಪ್ರದೇಶಗಳಲ್ಲೆಲ್ಲ ಗಣೇಶೋತ್ಸವದ ಆಚ ರಣೆ ಪ್ರಾರಂಭವಾಯಿತು. ಉತ್ಸವದಲ್ಲಿ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ತರುಣರಿಗೆ, ಹಿರಿಯರಿಗೆ, ಮಹಿಳೆಯರಿಗೆ, ಬೇರೆ ಬೇರೆ ಸ್ಪರ್ಧೆಗಳು ಹಮ್ಮಿಕೊಳ್ಳಲಾಗುತ್ತಿತ್ತು. ಯಕ್ಷಗಾನ, ಹರಿಕಥೆಗಳು, ಧಾರ್ಮಿಕ ಭಾಷಣಗಳು, ಬಹಳ ಚೊಕ್ಕವಾಗಿ ಆಚರಿಸಲ್ಪಡುತ್ತಿದ್ದವು. ಜನರು ಭಕ್ತಿ-ಗೌರವಗಳಿಂದ ಗಣೇಶ ವಿಗ್ರಹ ಸ್ಥಾಪಿಸಲ್ಪಟ್ಟ ಸ್ಥಳಕ್ಕೆ ದೇವಸ್ಥಾನದ ಸ್ಥಾನಮಾನ ನೀಡುತ್ತಿದ್ದರು. ತಮ್ಮ ಕೈಲಾದ ದೇಣಿಗೆ ಕೊಡುತ್ತಿದ್ದರು. ನಾವೆಲ್ಲರೂ ಒಂದೇ ಎಂಬ ಭಾವನೆ ಈ ಸಾರ್ವಜನಿಕ ಗಣೇಶೋತ್ಸವದಿಂದ ಮೂಡುತ್ತಿತ್ತು.

ಮುಂಬಯಿ ಮತ್ತು ಪೂರ್ಣ ಮಹಾನಗರಗಳಲ್ಲಿ ಗಣೇಶೋತ್ಸವ ಭರ್ಜರಿಯಿಂದ ಆಚರಿಸುತ್ತಾರೆ. ಮುಂಬಾಯಿ ಮಹಾನಗರದಲ್ಲಿ ಗಣೇಶೋತ್ಸವ ಭರಾಟೆಯ ಅಂಗವಾಗಿ ಭಕ್ತನೊಬ್ಬ ತನ್ನ ತಲೆಯಲ್ಲಿ ತನ್ನ ಕೇಶ ವಿನ್ಯಾಸದಿಂದ ಗಣೇಶನನ್ನು ಚಿತ್ರ ಸಿಕೊಂಡಿದ್ದ. ಈ ಚಿತ್ರ ರೂಪಿಸಿದವರು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡಿಗ ಶಿವರಾಂ ಭಂಡಾರಿ.

ಗಣೇಶನನ್ನು ಮೋದಕ ಪ್ರಿಯ ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಗಣೇಶೋತ್ಸವದಲ್ಲಂತೂ ಪ್ರತಿದಿನದ ಪೂಜೆಯ ಸಂದರ್ಭದಲ್ಲಿ ಬಿಸಿಬಿಸಿಯಾದ ಮೋದಕಗಳ ತಟ್ಟೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿತ್ತು. ಆದರೆ, ಇಂದು ಎಲ್ಲೆಡೆ ಗಣೇಶೋತ್ಸವದ ಮೂಲ ಉದ್ದೇಶವನ್ನೇ ಜನರು ಮರೆಯುತ್ತಿದ್ದಾರೆ. ನಮ್ಮ ಯುವ ಪೀಳಿಗೆ ಉತ್ಸವದ ರೂಪವನ್ನೇ ಪೂರ್ತಿ ತಿರುಚುತಿದಾರೆ. ಒಂದು ಊರಿಗೆ ಒಂದು ಕೇರಿಗೆ ಒಂದು ಸಾರ್ವಜನಿಕ ಗಣಪತಿ ಉತ್ಸವ ಇಟ್ಟುಕೊಂಡರೆ, ಎಲ್ಲಾ ಕ್ಷೇಮವಾಗಿ ನಡೆಯಬಹುದು. ಆದರೆ, ಹಾಗಾಗುತ್ತಿಲ್ಲ ಸಾರ್ವಜನಿಕ ಅಂದಮೇಲೆ ಚಂದ ವಸೂಲು ಮಾಡುವುದು, ಸಾಮಾನ್ಯ ಹತ್ತು-ಹದಿನೈದು ಮಂದಿಗಳ ಒಳಗೊಂಡ ಗುಂಪೊಂದು ಯಾವುದೇ ಸೌಜನ್ಯ ತೋರಿಸದೆ, ಸಾರ್ವಜನಿಕರಲ್ಲಿ ಹಣ ವಸೂಲಿ ಮಾಡುತ್ತಾರೆ. ಕೀಳುಮಟ್ಟಕ್ಕೆ ಇಳಿಯುತ್ತಾರೆ. ದಿನವಿಡೀ ಹಣ ಸಂಗ್ರಹಣೆ ಮಾಡಿ ಸಂಜೆಯಾಗುತ್ತಿದ್ದಂತೆ ಶರಾಬಿನ ಮೊರೆ ಹೋಗುತ್ತಾರೆ. ವಿಸರ್ಜನೆಯ ದಿವಸವಂದು ಕೇಳುವುದೇ ಬೇಡ, ಪವಿತ್ರವಾದ ವಿಘ್ನ ವಿನಾಶಕ ಮೂರ್ತಿಯನ್ನು ಕಂಠ ಪೂರ್ತಿ ಕುಡಿದೆ ಮುಟ್ಟುತ್ತಾರೆ. ಅಸಹ್ಯವಾಗಿ ನರ್ತಿಸುತ್ತಾರೆ. ಪರಸ್ಪರ ಜಗಳ ಆಡುವುದು, ಚೂರಿಯಿಂದ ಇರಿಯುವುದು, ಮರಣ ಹೊಂದಿದ ಉದಾಹರಣೆಗಳು ಉಂಟು.

ಎಂತಹ ವಿಪರ್ಯಾಸ ! ತಿಲಕರ ಕನಸು ನುಚ್ಚುನೂರಾಗುವ ದಿನ ದೂರವಿಲ್ಲ ವೆನಿಸುತ್ತದೆ. ನಿಧಿ ಸಂಗ್ರಹಿಸುವಲ್ಲಿ ಒತ್ತಾಯ, ಧ್ವನಿ ಪ್ರದೂಷಣ, ಅತಿ ಕರ್ಚಿನ ಅಲಂಕಾರ, ಅಭಿರುಚಿ ಹೀನ ಹಾಡುಗಳು ಮತ್ತು ಕುಣಿತ ಹೀಗಾಗಬಾರದು, ಯಾವುದು ಪಾತ್ರ, ಯಾವುದು ಅಪಾತ್ರ ಎನ್ನುವ ವಿವೇಕ ನಮ್ಮಲ್ಲಿರಬೇಕು. ಭಕ್ತಿ ಶ್ರದ್ಧೆಯಿಂದ, ಸದುದ್ದೇಶದಿಂದ ಉತ್ಸವಗಳು ನಡೆದು, ಸಮಾಜ ಸಂಘಟನೆಗೆ ಒಳ್ಳೆಯ ಸಂದೇಶ ನೀಡುವಂತಾಗಬೇಕು. ಜನಸಾಮಾನ್ಯರಿಗೆ ಈ ಆಚರಣೆ ಪ್ರಿಯವಾಗುವಂತಾಗಬೇಕೇ ವಿನಃ ಅಸ್ತವ್ಯಸ್ತವಾದ ಕೂಡದು, ಗಣೇಶೋತ್ಸವ ತನ್ನ ಮೌಲ್ಯ ಕಳೆದುಕೊಳ್ಳಬಾರದಲ್ಲವೇ ?


ಜೆಂಬಿಗಿ ಮೃತ್ಯುಂಜಯ
ಕನ್ನಡ ಉಪನ್ಯಾಸಕರು, ದಾವಣಗೆರೆ.

error: Content is protected !!