ಸರ್ಕಾರದ ಅನುಮತಿ ನೀಡಿದ್ದರೂ ಮುಂದುವರಿದ ಗೊಂದಲ
ದಾವಣಗೆರೆ, ಆ. 18- ಕೋವಿಡ್ ನಿಯಮಗಳನ್ನು ಪಾಲನೆ ಜೊತೆ ಸಾರ್ವಜನಿಕ ಗಣೇಶೋತ್ಸವ ಆಚರ ಣೆಗೆ ಸರ್ಕಾರ ಹಸಿರು ನಿಶಾನೆ ತೋರಿ ಸುತ್ತಿದ್ದಂತೆ, ಗೊಂದಲಗಳ ನಡು ವೆಯೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಾಗೂ ಬೀದಿ ಬದಿಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಕುರಿತ ಚಟುವಟಿಕೆಗಳು ಮತ್ತೆ ಗರಿಗೆದರಿವೆ.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಹಲವು ವರ್ಷಗಳಿಂದ ಗಣೇಶ ನನ್ನು ಪ್ರತಿಷ್ಠಾಪಿಸಿ ಸಂಪ್ರದಾಯ ಆ ಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ಉತ್ಸವಕ್ಕೆ ನಿಷೇಧ ಹೇರಿದ್ದರಿಂದ ಹಲವರಲ್ಲಿ ಬೇಸರವನ್ನುಂಟು ಮಾಡಿತ್ತು. ಆದರೆ, ಇದೀಗ ಮುಖ್ಯಮಂತ್ರಿಗಳು ಉತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಗಣೇಶನ ವಿಗ್ರಹ ಪ್ರತಿಷ್ಠಾಪನೆಗೆ ಹಲವಾರು ಗೊಂದಲ, ಅಡೆತಡೆಗಳಿವೆ.
ಕೊರೊನಾ ನಡುವೆಯೂ ಎಚ್ಚರಿಕೆಯಿಂದ ಹಬ್ಬ ಆಚರಿಸಲು ನಗರದ ಕೆಲವು ಪ್ರಮುಖ ಸಂಘಟನೆಗಳು ಈ ತಿಂಗಳುಗಳ ಮೊದಲೇ ಮುಂಗಡ ನೀಡಿ ವಿಗ್ರಹ ನಿರ್ಮಾಣಕ್ಕೆ ಆರ್ಡರ್ ಕೊಟ್ಟಿದ್ದವು. ಆದರೆ ಸರ್ಕಾರ ನಿಷೇಧ ಹೇರುತ್ತಿದ್ದಂತೆ, ಈ ಕಾರ್ಯಕ್ಕೆ ತುಸು ಹಿನ್ನಡೆಯಾಗಿತ್ತು. ಆದರೆ ದೇವಸ್ಥಾನದಲ್ಲಾದರೂ ಕೂರಿಸಿ ಸರಳವಾಗಿ ಆಚರಿಸುವ ನಿರ್ಧಾರಕ್ಕೆ ಸಂಘಟನೆಗಳು ತೀರ್ಮಾನಿಸಿದ್ದವು.
ವಿನೋಬನಗರದಲ್ಲಿ 21 ಇಂಚಿನ ಮೂರ್ತಿ
ಪ್ರತಿ ವರ್ಷ ಗಣೇಶನೋತ್ಸವದಲ್ಲಿ ಇಡೀ ಜಿಲ್ಲೆಯ ಗಮನ ಸೆಳೆಯುವ, ವಿನೋಬನಗರದ 2ನೇ ಮುಖ್ಯ ರಸ್ತೆಯಲ್ಲಿ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಸರಳವಾಗಿ 21 ಇಂಚಿನ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗುತ್ತಿದ್ದು, 9 ದಿನಕ್ಕೆ ಸರಳವಾಗಿ ಸಂಘಟನೆಯ ಪದಾಧಿಕಾರಿಗಳೇ ಸೇರಿ ವಿಸರ್ಜಿಸಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನದೊಳಗೆ ಒಂದು ಬಾರಿಗೆ ಕೇವಲ 10 ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಅವರು ಹೊರ ಬಂದ ನಂತರ ಮತ್ತೆ 10 ಭಕ್ತರನ್ನು ಒಳ ಬಿಡಲಾಗುವುದು ಎಂದು ಹೇಳಿದರು.
ನಿಯಮ ಪಾಲಿಸಲು ಸಿದ್ಧವಿದ್ದರೂ, ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸುತ್ತಿಲ್ಲ
ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲು ಸಿದ್ಧರಿದ್ದೇವೆ. ಆದರೆ ಜಿಲ್ಲಾಡಳಿತ ಸ್ಪಷ್ಟವಾಗಿ ತಿಳಿಸುತ್ತಿಲ್ಲ ಎಂದು ಹಿಂದೂ ಮಹಾ ಗಣಪತಿ ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಮಾರ್ಗ ಸೂಚಿ ಹೊರಡಿಸಿದೆ. ಆದರೆ ಇಲಾಖೆಯವರು ಒಂದು ದಿನದ ಮಟ್ಟಿಗಾದರೆ ಮಾತ್ರ ಸಾರ್ವಜನಿಕರ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ಹೆಚ್ಚಿನ ದಿನಗಳಾದರೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಎಂದು ಹೇಳುತ್ತಿದ್ದಾರೆ.
ಜಿಲ್ಲಾಡಳಿತಕ್ಕೆ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. ಇಲ್ಲಸಲ್ಲದ ಕಾರಣಗಳು ಹೇಳುತ್ತಿದ್ದಾರೆ. ಸರ್ಕಾರದ ನಿಯಮ ಪಾಲಿಸಿ ಹಬ್ಬ ಆಚರಿಸಿ ಎಂದು ಹೇಳುವ ಬದಲು ಇವರು ತಿಳಿದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಹೈಸ್ಕೂಲ್ ಮೈದಾನದಲ್ಲಿಯೇ ಚಿಕ್ಕದಾಗಿ ಮಂಟಪ ನಿರ್ಮಿಸಿ ಗಣೇಶನನ್ನು ಪ್ರತಿಷ್ಠಾಪಿಸುತ್ತೇವೆ.
ವಿಸರ್ಜನಾ ದಿನಾಂಕವನ್ನು ಕಮಿಟಿಯೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಟ್ರಸ್ಟ್ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಮೆರವಣಿಗೆ ಅವಕಾಶವಿಲ್ಲ. ಸರಳವಾಗಿಯೇ ವಿಸರ್ಜಿಸಲಾಗುವುದು ಎಂದರು.
ಈಗಾಗಲೇ ಹತ್ತು ಅಡಿ ವಿನಾಯಕನ ವಿಗ್ರಹಕ್ಕೆ ಆರ್ಡರ್ ಕೊಟ್ಟಿದ್ದೇವೆ. ಕೊಟ್ಟಿರುವ ವಿಗ್ರಹವನ್ನೇ ತಂದು ಪ್ರತಿಷ್ಠಾಪಿಸಬೇಕಿದೆ. ಈಗ ಹೊಸ ವಿಗ್ರಹ ತರಲು ಕಷ್ಟವಾಗುತ್ತದೆ.
ಮಾರುಕಟ್ಟೆಯಲ್ಲಿ ದೊಡ್ಡ ವಿಗ್ರಹಗಳು ಸಿಗುತ್ತಿಲ್ಲ ಎಂದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಕಳೆದ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿ ಮಂಟಪ ನಿರ್ಮಿಸಿ ಗಮನ ಸೆಳೆದದ್ದನ್ನು ನೆನೆಯಬಹುದು.
ಈಗ ಸಾರ್ವಜನಿಕವಾಗಿ ಆಚರಿ ಸಲು ಅನುಮತಿ ಇದೆ. ಆದರೆ ದೊಡ್ಡ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದು ಎಂದು ಅಧಿಕಾರಿಗಳು ಹೇಳುತ್ತಿರು ವುದು ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಮುಂಗಡ ಕೊಟ್ಟು ವಿಗ್ರಹ ತಯಾರಿಸಲು ಹೇಳಿದ್ದು, ವಿಗ್ರಹಗಳೂ ರೆಡಿ ಇವೆ. ಅದನ್ನು ಬಿಟ್ಟು ಬೇರೆ ಚಿಕ್ಕ ವಿಗ್ರಹಗಳನ್ನು ಕೊಳ್ಳಬೇಕೆಂದರೆ ಹೇಗೆ? ಎಂದು ಕೆಲ ಸಂಘಟನೆಗಳ ಪ್ರಶ್ನೆಯಾಗಿದೆ.
ಇನ್ನು ಬೀದಿ ಬದಿ ಗಣಪನ ಪ್ರತಿಷ್ಠಾಪನೆ ಬೇಡ ಎಂದು ಕುಳಿತಿದ್ದವರು, ಸರ್ಕಾರದ ಹೊರ ಆದೇಶದಿಂದಾಗಿ ಮತ್ತೆ ಹಬ್ಬದ ಸಂಭ್ರಮಕ್ಕೆ ಮುಂದಾಗಿದ್ದಾರೆ. ಆದರೆ ಪ್ರತಿಷ್ಠಾಪಿಸಲು ದೊಡ್ಡ ವಿಗ್ರಹಗಳು ಸಿಗುತ್ತಿಲ್ಲ. ಕಾರಣ ವಿಗ್ರಹ ತಯಾರಿಸುವವರು ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಅಷ್ಟಾಗಿ ದೊಡ್ಡಗಾತ್ರದ ವಿಗ್ರಹಗಳನ್ನು ತಯಾರಿಸಿಲ್ಲ. ಸರ್ಕಾರ ಹಬ್ಬಕ್ಕೆ ಮೂರು ದಿನಗಳು ಮಾತ್ರ ಬಾಕಿ ಇರುವುಗ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿರುವುದು ಈ ರೀತಿಯ ಗೊಂದಲಕ್ಕೆ ಕಾರಣವಾಾಗಿದೆ.
ಒಟ್ಟಿನಲ್ಲಿ ಈ ವರ್ಷದ ಗಣೇಶೋತ್ಸವ ಹಿಂದಿನ ವರ್ಷಗಳಂತೆ ಅದ್ದೂರಿಯಾಗಿ ನಡೆಯಲು ಕೊರೊನಾ ಅಡ್ಡಬಂದಿರುವುದಂತೂ ನಿಜ.