ಸ್ವಾತಂತ್ರ ಆಚರಣೆಗೂ ಸೆಕ್ಯೂರಿಟಿ ಬೇಕಾ?

ನಮ್ಮ ದೇಶ ಈಗಾಗಲೇ ಅನೇಕ ಸ್ವಾತಂತ್ರ್ಯ ದಿನಾಚರಣೆ ಗಳನ್ನು ಆಚರಿಸಿದೆ .ಇವತ್ತು ಆಚರಿಸುತ್ತಿದ್ದೇವೆ. ಇಷ್ಟು ವರ್ಷ ಆಚರಿಸಿದ ನಮಗೆ ಸಂಭ್ರಮಕ್ಕೇನೂ ಕೊರತೆಯಿಲ್ಲ ಆದರೆ ಪ್ರತಿವರ್ಷ ಆಚರಿಸುವ ಸ್ವಾತಂತ್ರ್ಯ ದಿನಕ್ಕೆ ಮಾತ್ರ ಭದ್ರತೆ ಹೆಚ್ಚಾಗುತ್ತಲೇ… ಇದೆ. ನಾನು ಈಗ ಹೇಳಹೊರಟಿರುವುದು ಇದನ್ನೇ ,1947 ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ ಬಂದಾಗ ಮೂರು ಶತಮಾನಗಳವರೆಗೆ ಜಾತಕ ಪಕ್ಷಿಗಳಾಗಿ ಕಾದ ಅದೆಷ್ಟೋ ಮಂದಿ ಭಾರತೀಯರು ಮತ್ತು ಅದಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ತನು-ಮನ-ಧನಗಳನ್ನು ಅರ್ಪಿಸಿದ ಅವರಿಗೆ ಹೋಲಿಸಿದರೆ ಸ್ವಾತಂತ್ರ್ಯ ಬರುವವರೆಗೆ ಇದ್ದ ದೇಶಭಕ್ತಿ ಬಂದಮೇಲೆ ನಮಗೆ ಕಡಿಮೆಯಾಗುತ್ತಿದೆಯೇ?….

ಸ್ವಾತಂತ್ರ್ಯ ಪಡೆಯಲು ನಾವು ಯಾವುದೇ ಯುದ್ಧ ಮಾಡಲಿಲ್ಲ, ಅಣು ಬಾಂಬುಗಳನ್ನು ಬಳಸಲಿಲ್ಲ ,ಯುದ್ಧ ವಿಮಾನಗಳನ್ನು ಖರೀದಿಸಲಿಲ್ಲ, ದೊಡ್ಡ ಸೈನ್ಯ ಕಟ್ಟಲಿಲ್ಲ ಯಾವುದೇ ಯುದ್ಧ ಮಾಡದೆ ಕೇವಲ ಅಹಿಂಸೆ ಮತ್ತು ಸಹಿಷ್ಣುತೆಯಿಂದ ಸ್ವಾತಂತ್ರ್ಯ ಪಡೆದವು. ಆದರೆ ಇಂದು ಭದ್ರತೆಗಾಗಿ ನಮ್ಮ ಸರ್ಕಾರ  ಬಜೆಟ್ ನ ಬಹುಪಾಲನ್ನು ಮೀಸಲಿಡ ಬೇಕಾಗಿದೆ ,ಇದು ಅನಿವಾರ್ಯವೂ ಆಗಿದೆ.

ಹಿಂದಿನಿಂದಲೂ ಒಬ್ಬ ರಾಜ ಮತ್ತೊಬ್ಬ ರಾಜನ ಮೇಲೆ ಒಂದು ದೇಶ ಮತ್ತೊಂದು ದೇಶದ ಮೇಲೆ ಆಕ್ರಮಣ ಮಾಡಿ ತನ್ನ ಅಧಿಪತ್ಯವನ್ನು ಸ್ಥಾಪಿಸುವುದು ನಡೆಯುತ್ತಲೇ ಇದೆ .ಇಂತಹ ಹೊರಗಿನ ಶಕ್ತಿಗಳನ್ನು ನಿಯಂತ್ರಿಸಲು ನಮಗೆ ಭದ್ರತೆಯು ಬೇಕು. ಆದರೆ ಆಂತರಿಕವಾಗಿ ನಾವು ಆಚರಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಭದ್ರತೆ ಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕ್ಕೆ ಯಾರು ಹೊಣೆ?

ಪ್ರತಿಸಾರಿ ರಾಷ್ಟ್ರೀಯ ಹಬ್ಬಗಳು ಬಂದಾಗ ನಾವು ಮಾಧ್ಯಮಗಳಲ್ಲಿ ನೋಡುವ ಕೇಳುವ ಒಂದು ವಿಚಾರ ಎಂದರೆ ಪ್ರಮುಖ ನಗರಗಳಲ್ಲಿ ,ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ,ಎಂಥಾ ವಿಪರ್ಯಾಸ ನಾವು ನಮ್ಮ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಿಸಲು ನಮಗೆ ಭದ್ರತೆ ಅವಶ್ಯಕತೆ ಇದೆ ಮತ್ತು ಈಗ ಅದು ಅನಿವಾರ್ಯವೂ ಆಗಿದೆ.

“Freedom is the first step for growth” ಎಂದು ವಿವೇಕಾನಂದರು ಹೇಳುತ್ತಾರೆ ಅವರು ಹೇಳುವ ಪ್ರಕಾರ ಸ್ವಾತಂತ್ರ್ಯ ಎಂಬುದು ಬೆಳವಣಿಗೆಯ ಮೊದಲ ಹೆಜ್ಜೆ. ಸ್ವತಂತ್ರ ಎಂದರೆಜವಾಬ್ದಾರಿ, ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮುಖಗಳು ಜವಾಬ್ದಾರಿಯನ್ನು ನಿರ್ಲಕ್ಷಿಸಿ ಸ್ವಾತಂತ್ರವನ್ನು ಅನುಭವಿಸಬೇಕೆಂದು ಬಯಸುವ ವ್ಯಕ್ತಿಯು ಸಮಾಜದಲ್ಲಿ ಘಾತಕ ಕಾರ್ಯಗಳ ಕೇಂದ್ರಬಿಂದು ಆಗುತ್ತಾನೆ ಎಂದು.

ತಾಯಿ ನಮಗೆಲ್ಲ ಎಷ್ಟು ಮುಖ್ಯವೋ ತಾಯಿನಾಡು ಅಷ್ಟೇ ಮುಖ್ಯ. ಹುಟ್ಟುವ ಪ್ರತಿ ಮಗುವಿಗೂ ಸಣ್ಣ ವಯಸ್ಸಲ್ಲೇ ತಾಯಿನಾಡಿನ ಮೇಲೆನ ಅಭಿಮಾನ ಮತ್ತು ಜವಾಬ್ದಾರಿಗಳನ್ನು ಹೇಳಿಕೊಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ .ಈ ದೇಶದ ಪ್ರಜೆಗಳಾಗಿ ಕೇವಲ ತಮ್ಮ ಹಕ್ಕುಗಳನ್ನು ಕೇಳುವ ನಾವು ನಮ್ಮ ಜವಾಬ್ದಾರಿಗಳನ್ನು ಏಕೆ ಮರೆತಿದ್ದೇವೆ?, ದೇಶ ನನಗೇನು ಕೊಟ್ಟಿತು,ಎನ್ನುವ ಬದಲು ದೇಶಕ್ಕಾಗಿ ನಾನು ಏನು ಕೊಟ್ಟೆ? …ಎಂಬ ಹಿರಿಯರ ಮಾತಿನಂತೆ ಪ್ರತಿಯೊಬ್ಬ ಪ್ರಜೆಯೂ ತಾನು ಹುಟ್ಟಿರುವ ನಾಡಿಗಾಗಿ ಏನಾದರೂ ಮಾಡಲೇಬೇಕಾಗಿದೆ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕಾಗಿದ್ದ ನಾವು ಅಸ್ತಿತ್ವಕ್ಕಾಗೇ ಹೆಣಗಾಡುತ್ತಿದ್ದೇವೆ.

ನಮ್ಮ ರಾಷ್ಟ್ರೀಯ ಹಬ್ಬಗಳು ಎಲ್ಲಿಯವರೆಗ ಕೇವಲ ಸರ್ಕಾರದ ಕಾರ್ಯಕ್ರಮಗಳಾಗಿ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಪರಿಸ್ಥಿತಿ ಮುಂದುವರೆಯುತ್ತಿರುತ್ತದೆ. ನಾವು ದೀಪಾವಳಿ ,ಯುಗಾದಿ ,ರಂಜಾನ್, ಮತ್ತು ಕ್ರಿಸ್ಮಸ್ ಅನ್ನು ಹೇಗೆ ಮನೆಗಳಲ್ಲಿ ಆಚರಿಸಿ ಸಂಭ್ರಮಿಸುತ್ತೇವೆಯೋ ಹಾಗೆಯೇ ನಮ್ಮ ರಾಷ್ಟ್ರೀಯ ಹಬ್ಬಗಳನ್ನು ಮನೆಮನೆಗಳಲ್ಲಿ ಆಚರಿಸಬೇಕು ಆಗ ಎಲ್ಲರೂ ದೇಶ ನಮಗಾಗಿ ..ನಾವು ದೇಶಕ್ಕಾಗಿ.. ಎಂಬಂತೆ ಬದುಕುತ್ತೇವೆ, ಇದು ನಾವು ಬದುಕಬೇಕಾದ ರೀತಿಯಾಗ ಬೇಕಾಗಿದೆ.

ನಾವು ಯಾವ ಬದಲಾವಣೆಯನ್ನು ನೋಡಬೇಕೆಂದು ಬಯಸುತ್ತೇವೆಯೋ ಅದು ನಮ್ಮಿಂದಲೇ ಆಗಬೇಕು.


ಪದ್ಮಾ ರವಿ
ಬೆಂಗಳೂರು.
[email protected]

error: Content is protected !!