ದಾವಣಗೆರೆ, ಆ.17- ತಮ್ಮದು ನೇರವಾಗಿ ವೈದ್ಯಕೀಯ ಕ್ಷೇತ್ರವಲ್ಲದಿದ್ದರೂ, ಆರೋಗ್ಯ ಮಾಹಿತಿಯ ವಿಶಿಷ್ಟ ಕೃತಿಯಾಗಿ ‘ನನ್ನ ಆರೋಗ್ಯ-ನನ್ನ ಸಂಪತ್ತು’ ಎಲ್ಲರೂ ಗಮನ ಸೆಳೆಯುವಂತಿದೆ. ಇಂತಹ ಪ್ರಯತ್ನದಿಂದ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ವಿಶಿಷ್ಟರೆನಿಸುತ್ತಾರೆ ಎಂದು ಉಪನ್ಯಾಸಕ ದಾದಾಪೀರ್ ನವಿಲೇಹಾಳ್ ಹೇಳಿದರು.
ನಗರದ ಸಿದ್ಧಗಂಗಾ ಶಾಲಾ ಆವರಣದ ಸುವರ್ಣಸೌಧದಲ್ಲಿ ನಿನ್ನೆ ನಡೆದ ‘ನನ್ನ ಆರೋಗ್ಯ-ನನ್ನ ಸಂಪತ್ತು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಆರೋಗ್ಯದ ಬಗೆಗಿನ ಕಾಳಜಿಯು ನಮ್ಮ ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಅದು ಭಾರತೀಯ ಸಂಸ್ಕೃತಿಯ ಒಂದು ಭಾಗವೆನಿಸಿದೆ. ಸುಶ್ರುತ, ಧನ್ವಂತ್ರಿ, ಚರಕದಂತಹ ವಿದ್ವಾಂಸರ ಕೊಡುಗೆಯನ್ನು ಚರಿತ್ರೆಯಲ್ಲಿ ಸ್ಮರಿಸುವಂತಾಗಿದೆ. ವೈದ್ಯಕೀಯ ಎಂಬುದು ಸೇವೆಯ ಭಾಗವಾಗಿತ್ತು. ಆದರೆ ಇಂದು ಅದು ವ್ಯಾಪಾರೀಕರಣ ವಿವಿಧ ಮುಖಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರ ಗಮನಕ್ಕೆ ಬಂದಿರುವಂತಹುದಾಗಿದೆ ಎಂದು ಹೇಳಿದರು.
ಆರೋಗ್ಯವನ್ನು ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ. ವೈಯಕ್ತಿಕ ಸದೃಢ ಆರೋ ಗ್ಯವು ದೇಶದ ಆರೋಗ್ಯವೂ ಹೌದು. ಕೇಂದ್ರವು ರಕ್ಷಣಾ ಕ್ಷೇತ್ರವನ್ನು ಹೊರತುಪಡಿಸಿದರೆ ಆರೋಗ್ಯ ಕ್ಷೇತ್ರಕ್ಕಾಗಿ ಹೆಚ್ಚಿನ ಬಜೆಟ್ ಅನ್ನು ತೆಗೆದಿರಿಸಿ ಆರೋಗ್ಯ ಸುಧಾರಣೆಯ ಯೋಜನೆಗಳನ್ನು ಜಾರಿಪಡಿಸುತ್ತಿದೆ ಎಂದರು.
ಪುಸ್ತಕದಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಎಲ್ಲರಿಗೂ ಅರ್ಥವಾಗುವಂತೆ ಸರಳವಾದ ನಿರೂಪಣೆ ಇರುವುದು ಗಮನಾರ್ಹ ಹಾಗೂ ಮೆಚ್ಚುಗೆಯ ಸಂಗತಿಯಾಗಿದೆ. ದಂತದ ರಕ್ಷಣೆ, ಮಧುಮೇಹ, ಆಮ್ಲಜನಕ, ಸಮತೋಲನ ಆಹಾರ, ಯೋಗ ಹೀಗೆ ಅನೇಕ ವಿಷಯಗಳತ್ತ ಗಮನ ಸೆಳೆಯುವ ಪ್ರಯತ್ನ ನಡೆದಿದೆ ಎಂದರು.
ಬಳಗದ ಗೌರವ ಅಧ್ಯಕ್ಷ ಎನ್.ಟಿ.
ಎರಿಸ್ವಾಮಿ ಪುಸ್ತಕ ಲೋಕಾರ್ಪಣೆಗೊಳಿಸಿದರು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೌಜ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳಗದ ಉಪಾಧ್ಯಕ್ಷ ಡಾ. ಈಶ್ವರ ಶರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಲೇಖಕ ಮತ್ತು ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ಕೃತಿಯ ಬಗ್ಗೆ ಮಾತನಾಡಿದರು. ಗಿರಿಶೈಲ ಪ್ರಕಾಶನದಿಂದ ಟಿ.ಎಸ್. ಶೈಲಜಾ ವೃಂದದವರು ಲೇಖಕ ವಿ.ಹನುಮಂತಪ್ಪ ಅವ ರನ್ನು ಸನ್ಮಾನಿಸಿದರು. ಅಶ್ವಿನಿ ಪ್ರಿಟಿಂಗ್ ಪ್ರೆಸ್ನ ಶ್ರೀಕುಮಾರ್ ಅವರನ್ನು ಸತ್ಕರಿಸಲಾಯಿತು.
ಶ್ರೀಮತಿ ಸತ್ಯಭಾಮ ಮಂಜುನಾಥ ಶಾರದಾ ಸ್ತುತಿಯನ್ನು ಪ್ರಾರ್ಥಿಸಿದರು. ಪತ್ರಿಕಾ ಬಳಗದ ಪ್ರಧಾನ ಕಾರ್ಯದರ್ಶಿ ಸಿ.ಕೆ. ಆನಂದ ತೀರ್ಥಾಚಾರ್ ಸ್ವಾಗತಿಸಿದರು. ಬಳಗದ ಸಂಚಾಲಕ ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು. ಭಾರತಿ ವಂದಿಸಿದರು.