ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಕವಾಯತು ಪರಿವೀಕ್ಷಣೆ ನಡೆಸಿದರು.
ಬಿಕೋ ಎನ್ನುತ್ತಿದ್ದ ಕ್ರೀಡಾಂಗಣ : ಧ್ವಜಾರೋಹಣದ ದಿನ ಸದಾ ಮಕ್ಕಳು, ಪೋಷಕರು, ಸಾರ್ವಜನಿಕರಿಂದ ತುಂಬಿರುತ್ತಿದ್ದ ಜಿಲ್ಲಾ ಕ್ರೀಡಾಂಗಣ ಇಂದು ಬಿಕೋ ಎನ್ನುತ್ತಿತ್ತು. ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು, ಸನ್ಮಾನಿತರು ಹಾಗೂ ಕುಟುಂಬ ಹೊರತುಪಡಿಸಿದರೆ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಇರಲಿಲ್ಲ. ಪ್ರತಿ ವರ್ಷ ಕಾಣುತ್ತಿದ್ದ ಸಂಭ್ರಮ ಈ ವರ್ಷ ಕಾಣದಾಗಿತ್ತು.
ಕ್ರೀಡಾಂಗಣದದ ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡಿ ಒಳ ಬಿಡಲಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದರೂ, ಯಾರಿಗೂ ತಾಪಮಾನ ಪರೀಕ್ಷೆ ಮಾಡಲಿಲ್ಲ. ಸ್ಯಾನಿಟೈಸರ್ ಹಾಕಲಿಲ್ಲ.
ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಲಾಗುವುದು ಎಂದು ಹೇಳಲಾಗಿತ್ತಾದರೂ, ಪ್ರಶಂಸನಾ ಪತ್ರ ಮಾತ್ರ ವಿತರಿಸಲಾಯಿತು.
ಜಿಲ್ಲಾ ಕ್ರೀಡಾಂಗಣದಲ್ಲಿ ಎಪ್ಪನಾಲ್ಕನೇ ಸ್ವಾತಂತ್ರೋತ್ಸವ ಆಚರಣೆ
ದಾವಣಗೆರೆ, ಆ. 15- ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಟಾನದಲ್ಲಿ ಸುಧಾರಣೆ ತಂದು ಅವುಗಳ ಉದ್ದೇಶಗಳನ್ನು ಪರಿಣಾಮ ಕಾರಿಯಾಗಿ ಈಡೇರಿಸಿ ನಮ್ಮ ಸುತ್ತಮುತ್ತಲಿನ ಸಮಾಜ ಹಾಗೂ ರಾಷ್ಟ್ರವನ್ನು ಬಲಿಷ್ಟಗೊಲಿಸುವ ನಿಟ್ಟಿನಲ್ಲಿ ನಮ್ಮ ಪಾಲಿನ ಕರ್ತವ್ಯವನ್ನು ಜವಾಬ್ದಾರಿ ಯಿಂದ ನಿಭಾಯಿಸಿ ಸ್ವಾತಂತ್ರ್ಯದ ಸಿಹಿಯನ್ನು ಸಾಮರಸ್ಯದಿಂದ ಸವಿಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಕರೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣೆ ನೆರವೇರಿಸಿ ಅವರು ಜಿಲ್ಲಾ ಜನತೆಯನ್ನು ದ್ದೇಶಿಸಿ ಮಾತನಾಡಿದರು.
ತಮ್ಮ ಸಂದೇಶದಲ್ಲಿ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಪರ ಯೋಜನಗಳನ್ನು ಹಾಗೂ ಸಾಧನೆಗಳನ್ನು ಹಂಚಿಕೊಂಡ ಅವರು, ಮುಂಬರುವ ದಿನಗಳಲ್ಲಿ ನಾವೆಲ್ಲರೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಕಟಿಬದ್ಧರಾಗೋಣ ಎಂದು ಹೇಳಿದರು.
ತಾಯಿ ಭಾರತಾಂಬೆಯ ದೇಶಪ್ರೇಮಿ ಸುಪುತ್ರ-ಸುಪುತ್ರಿಯರ ವೀರೋಚಿತ ವೀರಾಗ್ರಣಿಗಳ ಹೋರಾಟ ಹಾಗೂ ತ್ಯಾಗದ ಫಲವಾಗಿ ಸ್ವಾತಂತ್ರ್ಯವೆಂಬ ಅಮೃತ ಫಲ ಭಾರತಕ್ಕೆ ದೊರೆತದ್ದು ಈಗ ಇತಿಹಾಸವಾದರೂ, ಈ ಸ್ವಾತಂತ್ರ್ಯವೆಂಬ ಶಾಂತಿಯ ನೆಲೆಯಲ್ಲಿ ಸಾಗಬೇಕಿದೆ. ಇಡೀ ವಿಶ್ವವೇ ಕೊರೊನಾ ವೈರಸ್ ದಾಳಿಯಿಂದ ತಲ್ಲಣಗೊಂಡಿದೆ. ನಾವೆಲ್ಲರೂ ಇದನ್ನು ದಿಟ್ಟವಾಗಿ ಎದುರಿಸುತ್ತಿದ್ದಯ, ಕೊರೊನಾ ಜೊತೆ ಜೊತೆಗೇ ಅಭಿವೃದ್ದಿಯೆಡೆ ನಡೆಯಬೇಕಿದೆ ಎಂದು ಹೇಳಿದರು.
ವಿಕಲಚೇತನರಿಗೆ ಯಂತ್ರ ಚಾಲಿತ ಬೈಸಿಕಲ್ ವಿತರಿಸಲಾಯಿತು.
ದಿನ 3 ಸಾವಿರ ಕೊರೊನಾ ಟೆಸ್ಟ್ ಗುರಿ
ದಾವಣಗೆರೆ, ಆ. 15- ಪ್ರತಿ ದಿನ 3 ಸಾವಿರ ಕೊರೊನಾ ಟೆಸ್ಟ್ ಮಾಡುವ ಗುರಿಯನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು. ಧ್ವಜಾರೋಹಣ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳವಳವೂ ಹೆಚ್ಚಾಗಿದೆ. ಎಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆಯೋ ಅಲ್ಲಿ ಹೆಚ್ಚು ಪರೀಕ್ಷೆ ನಡೆಸಿ, ಸಾರ್ವಜನಿಕರ ಪ್ರಾಣ ಉಳಿಸುವ ಕೆಲಸ ಮಾಡುಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಇಡೀ ಜಿಲ್ಲೆಯಲ್ಲಿ ಪ್ರತಿಯೊಬ್ಬರನ್ನೂ ಪರೀಕ್ಷಿಸುವಂತಹ ದಿಟ್ಟ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಮಂದಿನ ದಿನಗಳಲ್ಲಿ ಕ್ರಮೇಣ ಕೋವಿಡ್ ಸೋಂಕು ಕಡಿಮೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯ ವಿದ್ಯಾರ್ಥಿಗಳ ನೇಮಕ: ರಾಜ್ಯದಲ್ಲಿ ಮೂರು ವರ್ಷದ ಅವಧಿ ಪೂರೈಸಿದ 3 ಸಾವಿರ ವೈದ್ಯ ವಿದ್ಯಾರ್ಥಿಗಳ ವೈದ್ಯಕೀಯ ವಿದ್ಯಾರ್ಥಿಗಳೆಲ್ಲರನ್ನೂ ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಿರಿಸಿದ್ದು, ಜಿಲ್ಲೆಯಲ್ಲೂ ಸುಮಾರು 150-200 ವಿದ್ಯಾರ್ಥಿಗಳು ಸೇವೆಗೆ ಲಭ್ಯವಿದ್ದಾರೆ ಎಂದರು.
ರಾಯಣ್ಣ ಸೇತುವೆ: ನಗರದ ರೈಲ್ವೇ ಕ್ರಾಸಿಂಗ್ ಮೇಲ್ಸೇತುವೆಗೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡಲು ದೂಡ ಹಾಗೂ ಪಾಲಿಕೆಗೆ ಸೂಚಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಡಿ.ಜೆ. ಹಳ್ಳಿ ಘಟನೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ದೇಶಕ್ಕೆ ದ್ರೋಹ ಬಗೆಯುವ ಕೆಲಸ ಯಾರು ಮಾಡಿದರೂ ಅವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಸಾರ್ವಜನಿಕರಿಲ್ಲದ ಕಾರ್ಯಕ್ರಮದಲ್ಲಿ ಸಚಿವರ ಸುದೀರ್ಘ ಭಾಷಣ : ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಸಾರ್ವಜನಿಕರು ಮಾತ್ರ ಆಗಮಿಸಿದ್ದರು. ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಅವರೂ ಜಾಗ ಖಾಲಿ ಮಾಡಿದ್ದರು. ಇದೇ ವೇಳೆ ಸಚಿವರು ಸುಮಾರು 10 ಪುಟಗಳಷ್ಟು ಸುದೀರ್ಘ ಭಾಷಣ ವಾಚಿಸಿದರು.
6 ತಂಡಗಳ ಪಥ ಸಂಚಲನ : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿಗಳ ತಂಡಗಳನ್ನು ಹೊರತುಪಡಿಸಿ ಸರ್ಕಾರಿಯ 6 ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡವು. ಡಿಎಆರ್ನ ಆರ್ಪಿಐ ಎಸ್.ಎನ್.ಕಿರಣ್ ಕುಮಾರ್ ಕವಾಯತು ಪ್ರಧಾನ ನಾಯಕತ್ವ ವಹಿಸಿದ್ದರು.
ರಾಘವೇಂದ್ರ ರಾಮತಾಳ ನೇತೃತ್ವದ ಡಿ.ಎ.ಆರ್ ಪೊಲೀಸ್ ತಂಡ, ಪಿಎಸ್ಐ ನೂರ್ ಆಹಮದ್ ನೇತೃತ್ವದ ನಾಗರಿಕ ಪೊಲೀಸ್ ತಂಡ, ಅಂಬರೀಶ್ ಕೆ.ಎಸ್ ನೇತೃತ್ವದ ಗೃಹರಕ್ಷಕ ದಳ ತಂಡ, ಭರತೇಶ್ ನೇತೃತ್ವದ ಅಬಕಾರಿ ಜಿಲ್ಲಾ ತಂಡ, ವೆಂಕಟೇಶ್ ನಾಯ್ಕ ನೇತೃತ್ವದ ಜಿಲ್ಲಾ ಅರಣ್ಯ ಇಲಾಖೆ ತಂಡ, ಸುಹಾಸ್.ಪಿ ನೇತೃತ್ವದ ಅಗ್ನಿಶಾಮಕ ದಳ ತಂಡವು ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಆಕರ್ಷಕ ಪಥಸಂಚಲನ ನಡೆಸಿದವು. ಈ 6 ತಂಡಗಳಿಗೆ ಡಿಎಆರ್ನ ಎಆರ್ಎಸ್ಐ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ನುಡಿಸಿದರು.
ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಹಿತಕ್ಕಾಗಿ ಶ್ರಮಿಸಿದ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಸಚಿವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. ಇದೇ ವೇಳೆ ವಿಕಚಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಗಳನ್ನು ವಿತರಿಸಲಾಯಿತು. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಗಳ ಸಮೇತ ಸ್ವಯಂ ದಾಖಲಿಸುವ ವಿನೂತನ ಯೋಜನೆಯ ‘ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪ್ರಚಾರ ವಾಹನಕ್ಕೆ’ ಸಚಿವರು ಚಾಲನೆ ನೀಡಿದರು. ದೃಷ್ಟಿದೋಷ ಉಳ್ಳವರಿಗೆ ಟಾಕಿಂಗ್ ಲ್ಯಾಪ್ಟಾಪ್ಗಳನ್ನು ವಿತರಿಸಲಾಯಿತು. ಅಲ್ಲದೆ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಸಹಕರಿಸಿದ ಪೊಲೀಸ್ ಡಾಗ್ ‘ತುಂಗಾ’ಳನ್ನು ಸನ್ಮಾನಿಸಲಾಯಿತು.
ಪೊಲೀಸ್ ಶ್ವಾನ ತುಂಗಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕ ನೀಡಿರುವ ಕೊಡುಗೆ ಅಪಾರವಾದದ್ದು. ದೇಶದಲ್ಲಿ ಯಾವಾಗ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭವಾಯಿತೋ ಆಗಿನಿಂದಲೇ ಕರ್ನಾಟಕದಲ್ಲೂ ಹೋರಾಟ ಆರಂಭವಾಗಿತ್ತು ಎಂದರು.
ಲಾಕ್ಡೌನ್ ಪರಿಣಾಮ ಎಲ್ಲಾ ವರ್ಗದ ಜನತೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ಇದನ್ನು ಅರಿತ ರಾಜ್ಯ ಸರ್ಕಾರ ಮೂರು ಪ್ಯಾಕೇಜ್ಗಳಲ್ಲಿ ಒಟ್ಟು 2272 ಕೋಟಿ ರೂ. ಪರಿಹಾರ ನೀಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಕಡಿಮೆ ಮಾಡಬೇಕಾಗಿದ್ದು, ಇದಕ್ಕಾಗಿ ರೋಗ ಲಕ್ಷಣ ಇರುವ ಜನರ್ನು ಕೂಡಲೇ ಸರ್ವೇಕ್ಷಣಾ ಘಟವು ಪತ್ತೆ ಹಚ್ಚಬೇಕು. ಹೆಚ್ಚು ಪ್ರಾಥಮಿಕ ಮತ್ತು ದ್ವಿತಿಯೀ ಸಂಪರ್ಕಿತರನ್ನು ಪತ್ತೆ ಹತ್ತಿಬೇಕಿದೆ ಎಂದು ಹೇಳಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪೊಲೀಸ್ ಮಹಾ ನಿರ್ದೇಶಕ ಎಸ್.ರವಿ, ಉಪ ವಿಭಾಗಾಧಿಕಾರಿ ಮಮತಾ ಹೊಸ ಗೌಡರ್, ಬಿ.ಟಿ. ಕುಮಾರ ಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.