‍‘ಸ್ವಾತಂತ್ರ್ಯ’ದಲ್ಲಿ ಆತ್ಮನಿರ್ಭರ್ ದಿವ್ಯ ಮಂತ್ರ

ಅತ್ಯುತ್ತಮ ಉತ್ಪನ್ನಗಳಿಂದ ಶ್ರೇಷ್ಠ ಭಾರತಕ್ಕೆ ಪ್ರಧಾನಿ ಮೋದಿ ಕರೆ

ನವದೆಹಲಿ, ಆ. 15 – ಕೆಂಪು ಕೋಟೆಯ ಮೇಲೆ ನೆರವೇರಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆತ್ಮ ನಿರ್ಭರ್ ಭಾರತಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ವಾವಲಂಬನೆಯ ಕಡೆಗಿನ ಭಾರತದ ನಡಿಗೆಯನ್ನು ಕೊರೊನಾ ನಿಲ್ಲಿಸಲಾಗದು ಎಂದಿದ್ದಾರೆ.

ಸತತ ಏಳನೇ ಬಾರಿಗೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿರುವ ಅವರು, ಭಾರತದ ಸಾರ್ವಭೌಮತಕ್ಕೆ ಸವಾಲೆಸೆಯುವವರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಲಾಗುವುದು ಎಂದಿದ್ದಾರೆ.

ಡಿಜಿಟಲ್ ಆರೋಗ್ಯ ಮಿಷನ್‌ಗೆ ಚಾಲನೆ, ಆರು ಲಕ್ಷ ಗ್ರಾಮಗಳನ್ನು ಆಪ್ಟಿಕಲ್ ಫೈಬರ್‌ನಿಂದ ಜೋಡಿಸುವುದು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಚುನಾವಣೆ ನಡೆಸುವುದೂ ಸೇರಿದಂತೆ ವಿಷಯಗಳಿಗೆ ಸಂಬಂಧಿಸಿದಂತೆ ಮೋದಿ ಘೋಷಣೆ ಮಾಡಿದ್ದಾರೆ.

ಸಾಂಪ್ರದಾಯಿಕ ಕುರ್ತಾ ಪೈಜಾಮ ದಿರಿಸಿನಲ್ಲಿದ್ದ ಪ್ರಧಾನಿ ಸುಮಾರು 90 ನಿಮಿಷಗಳ ಮಾತನಾಡಿದ್ದು, ಆತ್ಮನಿರ್ಭರ್ ಅಭಿಯಾನದ ಮೂಲಕ ಆಮದು ಕಡಿಮೆ ಮಾಡಿ ರಫ್ತಿಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ.

ಭಾರತ ದೇಶವನ್ನು ಮೇಕ್ ಇನ್ ಇಂಡಿಯಾದ ಜೊತೆಗೆ ಮೇಕ್ ಫಾರ್ ವರ್ಲ್ಡ್ ಮಂತ್ರದ ಜೊತೆಗೆ ಮುಂದುವರೆಯಬೇಕು ಎಂದು ಹೇಳಿರುವ ಮೋದಿ, ಆತ್ಮನಿರ್ಭರ್ ಭಾರತ್ ಕೇವಲ ಪದವಲ್ಲ, ಇಂದು 130 ಕೋಟಿ ಭಾರತೀಯರ ಮನಸ್ಸಿನಲ್ಲಿ ದಿವ್ಯ ಮಂತ್ರವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ವಿದೇಶಿ ನೇರ ಹೂಡಿಕೆ ಕಳೆದ ವರ್ಷ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ಮೋದಿ ತಿಳಿಸಿದ್ದಾರೆ.

ಭಾರತದ ನೀತಿಗಳು, ಪ್ರಕ್ರಿಯೆ ಹಾಗೂ ಉತ್ಪನ್ನಗಳು ವಿಶ್ವದಲ್ಲೇ ಅತ್ಯುತ್ತಮವಾಗಿರಬೇಕು ಎಂದು ಹೇಳಿರುವ ಪ್ರಧಾನಿ, ಆಗ ಮಾತ್ರವೇ ಶ್ರೇಷ್ಠ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದಿದ್ದಾರೆ.

ಒಟ್ಟಾರೆ ಆರ್ಥಿಕ ಬೆಳವಣಿಗೆ ಹಾಗೂ ಸ್ವಾವಲಂಬನೆಯ ಬಗ್ಗೆ ಒತ್ತು ನೀಡಿರುವ ಪ್ರಧಾನಿ, ಈ ಎಲ್ಲ ಪ್ರಕ್ರಿಯೆಗಳಲ್ಲಿ ಮಾನವೀಯತೆ ಕೇಂದ್ರ ಸ್ಥಾನದಲ್ಲಿರಬೇಕು ಎಂದಿದ್ದಾರೆ.

ಆತ್ಮನಿರ್ಭರ್ ಭಾರತದ ಎದುರು ಹಲವಾರು ಸವಾಲುಗಳು ಹಾಗೂ ಕಳವಳಗಳಿವೆ. ಆದರೆ, ಲಕ್ಷಾಂತರ ಸವಾಲುಗಳಿಗೆ ದೇಶದಲ್ಲಿ ಕೋಟ್ಯಂತರ ಪರಿಹಾರಗಳಿವೆ. ವೋಕಲ್ ಫಾರ್ ಲೋಕಲ್ ಎಂಬುದು ಭಾರತದ ಮಂತ್ರವಾಗಿದೆ ಎದು ಮೋದಿ ಹೇಳಿದ್ದಾರೆ.

ತಮ್ಮ ಸರ್ಕಾರ ರೈತರನ್ನು ನಿರ್ಬಂಧಗಳಿಂದ ಮುಕ್ತಗೊಳಿಸಿದೆ. ಈಗ ಅವರು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಸೋಪು ಇಲ್ಲವೇ ಬಟ್ಟೆ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ತಮಗೆ ಇಷ್ಟ ಬಂದ ಹಾಗೆ ಮಾರುತ್ತಾರೆ. ಆದರೆ, ಸ್ವಾತಂತ್ರ್ಯ ದೊರೆತ 70 ವರ್ಷಗಳ ನಂತರವೂ ರೈತರು ವ್ಯಾಪಾರದ ಸ್ವಾತಂತ್ರ್ಯ ಹೊಂದಿರಲಿಲ್ಲ ಎಂದು ಪ್ರಧಾನಿ ವಿಷಾದಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ನೈರ್ಮಲ್ಯ ಕಾರ್ಮಿಕರೂ ಸೇರಿದಂತೆ ಕೊರೊನಾ ವಾರಿಯರ್‌ಗಳಿಗೆ ಪ್ರಶಂಸಿಸಿರುವ ಪ್ರಧಾನಿ, ಭಾರತ ಕೊರೊನಾ ವಿರುದ್ದ ಜಯ ಸಾಧಿಸಲಿದೆ ಎಂಬುದು 130 ಕೋಟಿಗೂ ಹೆಚ್ಚಿನ ನಾಗರಿಕರ ಬದ್ಧತೆಯಾಗಿದೆ ಎಂದಿದ್ದಾರೆ.

error: Content is protected !!