ಮುಂದಿನ ವಾಲ್ಮೀಕಿ ಜಾತ್ರೆ ವೇಳೆಗೆ ಸುಸಜ್ಜಿತ ರಥ : ಸಚಿವ ಸಿಂಗ್‌

ಮುಂದಿನ ವಾಲ್ಮೀಕಿ ಜಾತ್ರೆ ವೇಳೆಗೆ ಸುಸಜ್ಜಿತ ರಥ : ಸಚಿವ ಸಿಂಗ್‌ - Janathavaniಮಲೇಬೆನ್ನೂರು, ಆ. 16- ಮುಂದಿನ ವಾಲ್ಮೀಕಿ ಜಾತ್ರೆ ವೇಳೆಗೆ ಸುಮಾರು 1.27 ಕೋಟಿ ರೂ. ವೆಚ್ಚದ ವಾಲ್ಮೀಕಿ ತೇರನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಡುವುದಾಗಿ ಅರಣ್ಯ ಸಚಿವ ಆನಂದ್ ಸಿಂಗ್ ಶ್ರೀಗಳಿಗೆ ಮಾತು ಕೊಟ್ಟರು.

ಅವರು ಭಾನುವಾರ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಶ್ರೀಗಳವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಲಿಂಗೈಕ್ಯ ಜಗದ್ಗುರು ಪುಣ್ಯಾನಂದ ಪುರಿ ಶ್ರೀಗಳವರ ಪ್ರೇರಣೆಯಿಂದಾಗಿಯೇ ನಾನು ರಾಜಕೀಯಕ್ಕೆ ಬಂದಿದ್ದು, ನನ್ನ ರಾಜಕೀಯ ಬೆಳವಣಿಗೆಯಲ್ಲಿ ವಾಲ್ಮೀಕಿ ಸಮಾಜದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಸ್ಮರಿಸಿದ ಆನಂದ್ ಸಿಂಗ್, ಶ್ರೀಗಳು ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗಾಗಿ ಕೈಗೊಳ್ಳುವ ಎಲ್ಲಾ ಹೋರಾಟದಲ್ಲೂ ನಾನು ಅವರ ಜೊತೆಯಾಗಿ ರುತ್ತೇನೆ. ವಾಲ್ಮೀಕಿ ರಥ ನಿರ್ಮಿಸುವ ಕುರಿತು ಶ್ರೀಗಳು ನನಗೆ ನೀಡಿರುವ ಯೋಜನೆ ಪ್ರಕಾರ ಸುಸಜ್ಜಿತವಾದ ರಥವನ್ನೇ ತಯಾರು ಮಾಡಿಸಿಕೊಡುತ್ತೇನೆ ಎಂದರು.

ಖಾತೆ ಬದಲಾವಣೆ ಬಗ್ಗೆ ಕೇಳಿಲ್ಲ: ನನ್ನ ಬಳಿ ಈಗಿರುವ ಖಾತೆಯನ್ನು ಬದಲಾವಣೆ ಮಾಡಿ ಎಂದು ನಾನೇನು ಸಿಎಂ ಅವರನ್ನು ಕೇಳಿಲ್ಲ. ಈಗಿರುವ ಖಾತೆಯನ್ನೇ ಸರಿಯಾಗಿ ನಿಭಾಯಿಸುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ಹೆಚ್ಚುವರಿ ಸಿಗುವುದು ಕಷ್ಟ ಎಂದು ಸಚಿವ ಆನಂದ್ ಸಿಂಗ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಯಾರಿಗೆ ಯಾವ ಖಾತೆ ನೀಡಬೇಕೆನ್ನುವುದು ಸಿಎಂಗೆ ಬಿಟ್ಟ ವಿಚಾರ. ನಾನಂತೂ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಸಚಿವರನ್ನು ಸಂಪುಟದಿಂದ ಕೈ ಬಿಡಬಹುದು. ಚೆನ್ನಾಗಿ ಕೆಲಸ ಮಾಡಿದರೆ ಪ್ರಮೋಶನ್ ಕೊಡಬಹುದು. ನಾನೂ 21 ದಿನ ಕ್ವಾರಂಟೈನ್‌ನ ಇದ್ದ ಕಾರಣ ಬೆಂಗಳೂರಿಗೆ ಹೋಗಿರಲಿಲ್ಲ. ಈಗ ಇಲ್ಲಿಂದ ಬೆಂಗಳೂರಿಗೆ ಹೋಗಿ ಇಲಾಖೆಯ ಸಭೆ ನಡೆಸುತ್ತೇನೆಂದು ತಿಳಿಸಿದರು.

ಸಸಿ ನೆಟ್ಟ ಸಚಿವರು: ಅರಣ್ಯ ಸಚಿವರಾಗಿ ಮಠಕ್ಕೆ ಭೇಟಿ ನೀಡಿದ ಸವಿನೆನಪಿಗಾಗಿ ಶ್ರೀಗಳು ಸಚಿವರಿಂದ ಮಠದ ಆವರಣದಲ್ಲಿ ಸಸಿಗಳನ್ನು  ನೆಡಿಸಿದರು. ಮಠದ ಆಡಳಿತಾಧಿಕಾರಿ ಓಬಳಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ್, ಮಠದ ಧರ್ಮದರ್ಶಿಗಳಾದ ಜಂಬಯ್ಯನಾಯಕ, ಕೆ.ಬಿ. ಮಂಜುನಾಥ್, ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್, ಅಳಿಯ ಸಂದೀಪ್ ಸಿಂಗ್, ತಹಶೀಲ್ದಾರ್ ರಾಮಚಂದ್ರಪ್ಪ,  ಬಳ್ಳಾರಿ ಜಿ.ಪಂ. ಸದಸ್ಯ ಗರಗ ಪ್ರಕಾಶ್ ಮರಿಯಮ್ಮನಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಕಟಿಗಿ ಜಂಬಯ್ಯ,  ಪೂಜಾರಿ ವೆಂಕೋಬನಾಯ್ಕ, ಪಟೇಗಾರ ಸಮಾಜದ ಮುಖಂಡ ಜಡೇ ವೆಂಕಟೇಶ್, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿತರರು ಈ ವೇಳೆ ಹಾಜರಿದ್ದರು. 

ಮಾತಿನ ಚಕಮಕಿ: ಸಚಿವರು ಬರುವ ವಿಷಯವನ್ನು ನನಗೆ ತಿಳಿಸಿಲ್ಲ ಎಂಬ ಕಾರಣಕ್ಕಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶ ಮಾಡಿದ ಸಚಿವ ಆನಂದ್ ಸಿಂಗ್, ಕೊನಾಕಾರಣದಿಂದಾಗಿ ಯಾರಿಗೂ ತಿಳಿಸಬೇಡಿ ಎಂದು ನಾನೇ ಹೇಳಿದ್ದೆ. ಇದರಲ್ಲಿ ಯಾರದೂ ತಪ್ಪಿಲ್ಲ ಎಂದು ಹರೀಶ್ ಅವರಿಗೆ ಸಮಾಧಾನ ಪಡಿಸಿದರು. ಶ್ರೀಗಳೂ ಕೂಡ ಇಬ್ಬರನ್ನೂ ಸಮಾಧಾನ ಪಡಿಸಿದರು. ಈ ಘಟನೆ ನಡೆದಾಗ ನಾಲ್ಕು ಜನರನ್ನು ಬಿಟ್ಟು ಬೇರಾರೂ ಇರಲಿಲ್ಲ ಎನ್ನಲಾಗಿದೆ.

error: Content is protected !!