ಪ್ರಗತಿ ಹೊಂದಿರುವ ರಾಷ್ಟ್ರಗಳನ್ನು ಬೆರಗಾಗುವಂತೆ ಮಾಡಿರುವ ಭಾರತ

ಪ್ರಗತಿ ಹೊಂದಿರುವ ರಾಷ್ಟ್ರಗಳನ್ನು ಬೆರಗಾಗುವಂತೆ ಮಾಡಿರುವ ಭಾರತ - Janathavaniಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಾತಂತ್ರ್ಯ ದಿನದ ಶುಭ ಸಂದೇಶ

ದಾವಣಗೆರೆ, ಆ.14- ಭಾರತ ಬ್ರಿಟಿಷರ ದಾಸ್ಯದ ಆಡಳಿತದಿಂದ ಹೊರ ಬಂದು ಇಂದಿಗೆ 74 ವಸಂತಗಳು ಸಂದಿದೆ. ಭಾರತ ಸ್ವತಂತ್ರ ರಾಷ್ಟ್ರವಾಗಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ನಗರಾಭಿವೃದ್ಧಿ ಖಾತೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ (ಭೈರತಿ) ತಿಳಿಸಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವದ ಮುನ್ನ ದಿನ ಪತ್ರಿಕಾ ಹೇಳಿಕೆಯಲ್ಲಿ ಸಂದೇಶ ನೀಡಿರುವ ಅವರು, ಸರ್ವಧರ್ಮದ ಸಮನ್ವಯ, ಜಾತ್ಯಾತೀತ ತತ್ವ ಹಾಗೂ ಉತ್ಕೃಷ್ಟವಾದ ಸಂವಿಧಾನವನ್ನು ಹೊಂದಿ, ಇತರೆ ದೇಶಗಳಿಗೆ ಮಾದರಿಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣೆಯಲ್ಲಿ ನಿಂತು, ಪ್ರಗತಿ ಹೊಂದಿರುವ ರಾಷ್ಟ್ರಗಳನ್ನು ಬೆರಗಾಗುವಂತೆ ಮಾಡಿದೆ ಎಂದಿದ್ದಾರೆ. 

ಸ್ವಾತಂತ್ರ್ಯ ಪಡೆಯಲು ಹಲವಾರು ನಾಯಕರ ಹೋರಾಟ, ತ್ಯಾಗ, ಬಲಿದಾನ, ಪರಿಶ್ರಮ ಹಾಗೂ ಸತ್ಯಾಗ್ರಹ ಮಾರ್ಗ ಅವಿಸ್ಮರಣೀಯ. 1857 ರ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮುಂಚಿತವಾಗಿಯೇ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಂದೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ್ದರು. 1798 ರ ಆಗಸ್ಟ್ 15 ರಂದು ಜನಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವೂ ಹೌದು. ಕೆಲವರ ಕುತಂತ್ರದಿಂದ ಬ್ರಿಟಿಷರಿಗೆ ಸೆರೆ ಸಿಕ್ಕ ರಾಯಣ್ಣ ಮರಣದಂಡನೆಗೆ ಒಳಪಡುತ್ತಾನೆ.

ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ, ಲಾಲಾ ಲಜಪತ್ ರಾಯ್, ಸುಭಾಷ್ ಚಂದ್ರಭೋಸ್, ಚಂದ್ರಶೇಖರ್ ಆಜಾದ್, ವಿನಾಯಕ ದಾಮೋದರ್ ಸಾವರ್ಕರ್ ಸೇರಿದಂತೆ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ, ದೇಶದ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ. ಶಾಂತಿ ಪಥದಲ್ಲಿ ಸಾಗೋಣ, ಸುಖ-ಶಾಂತಿ, ನೆಮ್ಮದಿಯಿಂದ ಬದುಕೋಣ ಎಂದು ಸಚಿವರು ಆಶಯ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ 74ನೇ ಸ್ವಾತಂತ್ಯೋತ್ಸವದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 222ನೇ ಜಯಂತ್ಯೋತ್ಸವದ ಶುಭಾಷಯಗಳನ್ನು ಸಚಿವರು ತಿಳಿಸಿದ್ದಾರೆ.

error: Content is protected !!