ಕೈಕೊಟ್ಟ ಪ್ರತಿಬಿಂಬ…

ನನ್ನೂರು, ನನ್ನ ಹಳ್ಳಿಯ ಹೆಸರು ಬೆನ್ನಿಗೆ
ಅಂಟಿಸಿಕೊಂಡು ಓಡಿದ್ದೆವು ಬಹಳ
ಹುಮ್ಮಸ್ಸಿನಿಂದ ಅಪ್ಪಿಕೊಡು ತಬ್ಬಿಕೊಂಡು
ಪಟ್ಟಣವೇ ಶಾಶ್ವತ ನಮ್ಮಗಳ ನೆಲೆ-ಒಳೆ ಎಂದು
ಕೇವಲ ಮಾನವ ಬೀಸಿದ ಜಾಲಕ್ಕೆ ತನ್ನದ್ಯಾವುದೂ
ಇಲ್ಲಿಲ್ಲ ಎಂದರಿತು ಉಚ್ಛಬಡಾವಣೆ ಬಿಟ್ಟೆವು.

ಪಟ್ಟಣದ ಬಡಾವಣೆ ಬಿಟ್ಟು ನಿಂತೆನು ನಡು
ಮುಖ್ಯ ರಸ್ತೆಯಲಿ ನನ್ನನ್ನು ಯಾರಾದರೂ
ವಿಚಾರಿಸುವರೆಂದು! ಯಾರೂ ಕ್ಯಾರೆ ಎನ್ನದಿದ್ದಾಗ
ಸ್ವತಃ ಕನ್ನಡಿ ತೆರೆದು ನನ್ನ ಪ್ರತಿರೂಪದ ಜೊತೆ
ಮಾತನಾಡಲು ಪ್ರಯತ್ನಿಸಿದೆ! ನನ್ನ ಪ್ರತಿರೂಪವೂ ಸಹ
ಕನ್ನಡಿಯಲ್ಲಿ ಮುಖ ಹೊರಳಿಸಿದಾಗ…ಕಣ್ಣೀರು.

ಹೌಹಾರಿ ಊರ ಕಡೆ ನಿಜ ಮುಖದೊಂದಿಗೆ
ಹೆಜ್ಜೆಹಾಕಿದೆ ಕನ್ನಡಿ ಪ್ರತಿಬಿಂಬ ಮಾತ್ರ
ಮುನಿಸಿಕೊಂಡಂತೆ ಹೆಜ್ಜೆಗೆ ಗೆಜ್ಜೆಕಟ್ಟಲರೆ ಎಂದಿತು
ನಿರ್ಲಜ್ಜೆಯಿಂದ ಊರಕಡೆ ನಡೆಯಿತು ದೇಹ
ಬರುವಾಗ ದಾರಿಯಲ್ಲೇ ಹಿಂದಿದ್ದ ನನ್ನೂರ
ಹೆಸರ ಕಿತ್ತು ನನ್ನ ಎದೆಗೆ ಅಂಟಿಸಿಕೊಂಡು
ನಿರಾಳವಾಗಿ ನಡೆದೆ… ನನ್ನೂರ ಬೆಳುವಲ್ದ ಮಡಿಲಿಗೆ…


ಕೆ. ಸಿರಾಜ್ ಅಹಮ್ಮದ್
ಕ.ಸಾ.ಪ. ಜಿಲ್ಲಾ ಸಂಚಾಲಕರು, ಸಂತೇಬೆನ್ನೂರು.
[email protected]

error: Content is protected !!