ಖಾಸಗಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಸಕಲ ಸಿದ್ಧತೆ : ಅಪರ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಹರಪನಹಳ್ಳಿ, ಆ.8- ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಮಾತಾ ಆಸ್ಪತ್ರೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ತಾಲ್ಲೂಕು ಘಟಕದ ಆಶ್ರಯದಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊವೀಡ್‌ ಕೇರ್ ಸೆಂಟರ್‌ ಆಸ್ಪತ್ರೆಗೆ ಬಳ್ಳಾರಿಯ ಅಪರ ಜಿಲ್ಲಾಧಿಕಾರಿ ಮಂಜುನಾಥ್‌ ಅವರು ಭೇಟಿ ನೀಡಿ, ಪರಿಶೀಲಿಸಿ, ವೈದ್ಯರ ಜೊತೆ ಸಭೆ ನಡೆಸಿ ಮಾತನಾಡಿ, ಇಂತಹ ತುರ್ತು ಸಂದರ್ಭದಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಖಾಸಗಿ ವೈದ್ಯರು ಸ್ವಯಂ ಪ್ರೇರಿತರಾಗಿ ಕೊವೀಡ್‌ ಆಸ್ಪತ್ರೆಯನ್ನು ನಿರ್ಮಾಣ ಮಾಡಿರುವುದಕ್ಕೆ ಧನ್ಯವಾದಗಳು ಮತ್ತು ನಿಮಗೇನಾದರೂ ತೊಂದರೆಯಾದಲ್ಲಿ ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ ಎಂದು ವೈದ್ಯರಿಗೆ ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಮಾತನಾಡಿ, ಕೊರೊನಾ ವೈರಸ್‌ನಿಂದ ಉಸಿರಾಟ ತೊಂದರೆ ಇರುವ ರೋಗಿಗಳಿಗೆ ತುರ್ತು ಸೂಕ್ತ ಚಿಕಿತ್ಸೆ ನೀಡುವಂತೆ ಮತ್ತು ಹಾಲಿ ಇರುವ 15 ಆಕ್ಸಿಜನ್ ಸೌಲಭ್ಯ ವಾರ್ಡ್‌ಗಳನ್ನು ಹೆಚ್ಚಿಸುವಂತೆ ವೈದ್ಯರುಗಳಿಗೆ ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ಮಹೇಶ್‌ ಪ್ರತಿಕ್ರಿಯೆ ನೀಡಿ, ಪಟ್ಟಣದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಯವರು ಸೇರಿ ಐಎಂಐ ನೇತೃತ್ವದಲ್ಲಿ ಆಸ್ಪತ್ರೆ ಸ್ಥಾಪನೆಗೆ ಪ್ರಸ್ಥಾವನೆ ಕಳಿಸಿದ್ದು, ಜಿಲ್ಲಾಧಿಕಾರಿ ಅನುಮತಿ ನೀಡಿದ ಕೂಡಲೇ ಕಾರ್ಯಾರಂಭ ಆಗುತ್ತದೆ. ಅಂದಾಜು 70 ಖಾಸಗಿ ವೈದ್ಯರು ಸರತಿ ಪ್ರಕಾರ ಅಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದರು.

ಈ ವೇಳೆ ತಹಶೀಲ್ದಾರ್ ಜಿ.ಅನಿಲ್ ಕುಮಾರ್, ಟಿಹೆಚ್‌ಒ ಡಾ.ಶಿವಕುಮಾರ್, ಐಎಂಎ ನ ಡಾ. ಜಿ.ವಿ.ಹರ್ಷ, ಡಾ.ಶೇಕ್ ನಫ್ತಾರ್, ಆರೋಗ್ಯ ಮಾತಾ ಆಸ್ಪತ್ರೆಯ ಸಿಸ್ಟರ್ ಸುಂದರಿ, ಸಿಸ್ಟರ್ ಮರಲೀನ್‌ ಸೇರಿದಂತೆ ಹರಪನಹಳ್ಳಿ ಎಲ್ಲಾ ಖಾಸಗಿ ಆಸ್ಪತ್ರೆ ವೈದ್ಯರು ಈ ಸಭೆಯಲ್ಲಿ ಹಾಜರಿದ್ದರು.

error: Content is protected !!