ಅಣಬೂರು ಕೃಷಿ ಪತ್ತಿನ ಸಹಕಾರ ಸಂಘದ ಸಭೆ

ಜಗಳೂರು, ಡಿ. 29- ಸಾಲ ವಿತರಣೆ ಹಾಗೂ ಫಲಾನುಭವಿಗಳ ಆಯ್ಕೆಯಲ್ಲಿ ಮತ್ತು ಹಣಕಾಸಿನ ಅವ್ಯವಹಾರದ ಬಗ್ಗೆ ದೂರುಗಳಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಅಣಬೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎಲ್ಲಾ ನಿರ್ದೇಶಕರು ಒತ್ತಾಯಿಸಿದ್ದಾರೆ.

ಎಲ್ಲಾ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿಲ್ಲ, ಆಯ್ದ ಕೆಲವು ರೈತರಿಗೆ ಮಾತ್ರ ಪ್ರತಿ ವರ್ಷ ಸಾಲ ವಿತರಿಸಲಾಗಿದೆ. ಸಾಲ ವಿತರಣೆ ಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಷೇರು ಹಣ ವಸೂಲಿ ಮಾಡಲಾಗುತ್ತಿದೆ. ಸಾಲ ಪಡೆದ ರೈತರು ಎಟಿಎಂ ಕಾರ್ಡ್ ಹಾಗೂ ಪಾಸ್‌ ಪುಸ್ತಕಗಳನ್ನು ಸಂಬಂಧಪಟ್ಟ ರೈತರಿಗೆ ಕೊಡದೇ ಸಹಕಾರ ಸಂಘದಲ್ಲಿ ಅಕ್ರಮವಾಗಿ ಇಟ್ಟುಕೊಳ್ಳಲಾಗಿದೆ. ಇದು ಅವ್ಯವಹಾರಕ್ಕೆ ಕಾರಣವಾಗುತ್ತದೆ ಎಂದು ಅಣಬೂರು, ಜ್ಯೋತಿಪುರ, ಅಣಬೂರು ಗೊಲ್ಲರಹಟ್ಟಿ ಗ್ರಾಮದ ಹಲವು ರೈತರು ಆರೋಪಿಸಿದರು.

ನಿರ್ದೇಶಕ ಅಣಬೂರು ಮಠದ ಕೊಟ್ರೇಶ್ ಮಾತನಾಡಿ, ಈ ಹಿಂದೆ ಸಾಕಷ್ಟು ವ್ಯತ್ಯಾಸಗಳಾಗಿವೆ. ಈ ಬಾರಿ ರೈತರಿಗೆ ಅನ್ಯಾಯವಾಗದಂತೆ ಸಾಲವನ್ನು ದಾಖಲೆಗಳನ್ನು ಆಧರಿಸಿ ಸೌಲಭ್ಯ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಿದರು.

ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಮಾತನಾಡಿ, ರೈತರಿಗೆ ನೇರವಾಗಿ ಸಾಲದ ಹಣ ಜಮಾ ಆಗುವುದಿಲ್ಲ. ಸಂಘದ ಖಾತೆಗೆ ಜಮಾ ಆಗಿ ನಂತರ  ರೈತರ ಖಾತೆಗೆ ಜಮಾ ಆಗುತ್ತದೆ. ಎಟಿಎಂ ತಾಂತ್ರಿಕ ಸಮಸ್ಯೆಯಿದ್ದು, ಶೀಘ್ರವೇ ಸಾಲದ ರೈತರಿಗೆ ವಿತರಿಸಲಾಗುವುದು ಎಂದರು.

ಸಹಕಾರ ಸಂಘದ ಅಧ್ಯಕ್ಷ ಸಣ್ಣಕಾಟಪ್ಪ, ಉಪಾಧ್ಯಕ್ಷ ಬಸವರಾಜ್, ನಿರ್ದೇಶಕರಾದ ಎಂ. ತಿಪ್ಪೇಸ್ವಾಮಿ, ಗುಡ್ಡಪ್ಪ, ಎನ್. ಬೋರೇಶ್, ನೀಲಪ್ಪ, ಶಾಂತಮ್ಮ, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!