ದಾವಣಗೆರೆ, ಡಿ.26- ದುಬಾರಿ ಬೆಲೆಯ ಔಷಧಿಗಳನ್ನು ಖರೀದಿಸಿ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ಜನತೆಗೆ ಜನೌಷಧಿ ಕೇಂದ್ರಗಳು ವರದಾನವಾಗಿವೆ. ಇತ್ತೀಚೆಗೆ ಬಹುತೇಕ ಜನರನ್ನು ಕ್ಯಾನ್ಸರ್, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆಗಳು ಕಾಡುತ್ತಿವೆ. ಇಂತಹ ಕಾಯಿಲೆಗಳಿಗೆ ದುಬಾರಿ ಔಷಧಿ ಕೊಳ್ಳುವುದು ಸಾಮಾನ್ಯ ಜನರಿಗೆ ಕಷ್ಟಸಾಧ್ಯ.
ಔಷಧಿಗೆ ಹಣ ಹೊಂದಿಸಲಾಗದೆಯೇ ಬಡ ಜನತೆ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದುದು ಹೊಸ ವಿಷಯವಿಲ್ಲ. ಆದರೆ ಇದೀಗ ಅತಿ ಕಡಿಮೆ ಬೆಲೆಯಲ್ಲಿ ಔಷಧಿ ನೀಡುವ ಜನೌಷಧಿ ಕೇಂದ್ರಗಳು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.
ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಪ್ರಥಮವಾಗಿ ಜನೌಷಧಿ ಕೇಂದ್ರ ಆರಂಭವಾದಾಗ ಔಷಧಿಗೆ ಅತಿ ಹೆಚ್ಚು ಬೇಡಿಕೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಇದೀಗ ನಗರದಲ್ಲಿ ಎಂಟು ಸ್ಥಳಗಳಲ್ಲಿ ಜನೌಷಧಿ ಕೇಂದ್ರ ಆರಂಭಿಸಲಾಗಿದೆ.
ಪ್ರಧಾನ ಮಂತ್ರಿ ಜನ ಔಷಧ ಕೇಂದ್ರವು ಭಾರತ ಸರ್ಕಾರದ ಔಷಧಿ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಜೆನರಿಕ್ ಔಷಧಿಗಳ ಮೆಡಿಕಲ್ ಸ್ಟೋರ್ ಆಗಿದ್ದು, ಅತ್ಯುತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳು ಖಾಸಗಿ ಔಷಧಿಗಳ ಬೆಲೆಗಿಂತ ಶೇ.30 ರಿಂದ 80ರವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತಿವೆ.
ಈ ಜನರಿಕ್ ಔಷಧಿಯು ಭಾರತ ಸರ್ಕಾರದ ಪ್ರಯೋಗ ಶಾಲೆಯಲ್ಲಿ ತಯಾರಾಗಿ ನೇರವಾಗಿ ಜನ ಔಷಧಿ ಬಳಿಗೆಗೆ ಬರುತ್ತವೆ. ಇದರಿಂದ ಔಷಧಿಗಳಂತೆ ಅಧಿಕ ತಯಾರಿಕಾ ವೆಚ್ಚ, ಜಾಹೀರಾತು ವೆಚ್ಚ, ಮಾರುಕಟ್ಟೆ ವೆಚ್ಚ, ತೆರಿಗೆ ಇರುವುದಿಲ್ಲ.
ಆದ್ದರಿಂದ ಅತಿ ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಬಡ ಜನತೆಗೆ ಅನುಕೂಲವಾಗಿದೆ. ಜನತೆ ಮತ್ತಷ್ಟು ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಬಿಜೆಪಿ ಮುಖಂಡ ಎನ್.ಜಿ. ಪುಟ್ಟಸ್ವಾಮಿ.