ಉತ್ತರಾಯಣ – ನಿಜ ಸಂಕ್ರಾಂತಿ

ನಾವು ಸಾಮಾನ್ಯವಾಗಿ ಸಂಕ್ರಾಂತಿಯನ್ನು ಆಚರಿಸುವುದು ಜನವರಿ 14 ರಂದು. ಅದರಲ್ಲೂ ತಮಿಳುನಾಡಿನಲ್ಲಿ ಪೊಂಗಲ್ ಎಂದು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಇದೆಲ್ಲವೂ ಖಗೋಳದಲ್ಲಿ ನಡೆಯುವ ವಿದ್ಯಮಾನಕ್ಕೆ ತಕ್ಕಂತೆ ಜರುಗುತ್ತದೆ. ಆದರೆ ನಿಜವಾಗಿಯೂ ಸಂಕ್ರಾಂತಿಯು ಯಾವಾಗ ಪ್ರಾರಂಭವಾಗುತ್ತದೆ ಎಂದು ತಿಳಿಯುತ್ತಾ ಹೋದಾಗ ಖಗೋಳ, ಸೂರ್ಯ, ಭೂಮಿ ಇವುಗಳ ಚಲನೆ ಕಾರಣವಾಗುತ್ತದೆ. ಖಗೋಳದ ಚಲನೆಗೆ ಕಾರಣ ಭೂಮಿ ತನ್ನ ಅಕ್ಷದ ಸುತ್ತ 24 ಗಂಟೆಗಳಿಗೊಮ್ಮೆ ತಿರುಗುವುದೇ ಆಗಿದೆ. ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತಿರುವುದರಿಂದ, ಇಡೀ ಖಗೋಳವೇ ಪಶ್ಚಿಮ ದಿಕ್ಕಿಗೆ ತಿರುಗುತ್ತಿರುವ ಹಾಗೆ ಭಾಸವಾಗುತ್ತದೆ. ಇನ್ನು ಸೂರ್ಯ-ಚಂದ್ರರು ಮತ್ತು ಗ್ರಹಗಳು ಖಗೋಳದಲ್ಲಿ ಚಲಿಸುವ ಮಾರ್ಗವೇ ಕ್ರಾಂತಿ ವೃತ್ತ.  ಭೂಮಿಯೇ ಸೂರ್ಯನ ಸುತ್ತ 365 ದಿನಗಳಿಗೊಮ್ಮೆ ಸುತ್ತುತ್ತಿದ್ದರೂ, ಭೂಮಿಯ ಮೇಲಿನ ವೀಕ್ಷಕನಿಗೆ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಿರುವ ಹಾಗೆ ಭಾಸವಾಗುತ್ತದೆ. ಸೂರ್ಯನ ಸುತ್ತಲಿನ ಭೂ ಕಕ್ಷೆಯನ್ನು ನಾವು ಕಾಲ್ಪನಿಕವಾಗಿ ಖಗೋಳವನ್ನು ಮುಟ್ಟುವವರೆಗೆ ವಿಸ್ತರಿಸಿದರೆ ದೊರೆಯುವ ವೃತ್ತವನ್ನು `ಕ್ರಾಂತಿ ವೃತ್ತ’ ಎನ್ನುತ್ತೇವೆ.

ಸೂರ್ಯನ ತೋರಿಕೆಯ ವಾರ್ಷಿಕ ಚಲನೆಯ ಮಾರ್ಗ ಕ್ರಾಂತಿ ವೃತ್ತವೇ ಆಗಿದೆ. ಭೂಮಿ ತಾನು ಸುತ್ತುತ್ತಿರುವ ತನ್ನ ಕಕ್ಷೆಯು ಸೂರ್ಯನ ಸುತ್ತಲಿನ ಕಕ್ಷೆಯ ಸಮತಲಕ್ಕೆ ಲಂಬವಾಗಿರದೇ 23.5 ಡಿಗ್ರಿ ಓರೆಯಾಗಿದೆ. ಈ ಕಾರಣದಿಂದ ಕ್ರಾಂತಿವೃತ್ತವು ಸಹಾ 23.5 ಡಿಗ್ರಿಯಷ್ಟು ಓರೆಯಾಗಿದೆ. ಈ ಎರಡೂ ವೃತ್ತಗಳ ಮಧ್ಯದ ಅಂತರ ಗರಿಷ್ಠ ಪ್ರಮಾಣವನ್ನು ಮುಟ್ಟುವ ಬಿಂದುಗಳಿಗೆ ಕರ್ಕಾಯನ ಮತ್ತು ಮಕರಾಯನ ಬಿಂದು ಎನ್ನುತ್ತೇವೆ. ಸೂರ್ಯ ಮಾರ್ಚ್ 21 ರಂದು ವಸಂತ ವಿಷುವ ಬಿಂದುವಿಗೂ, ಸೆಪ್ಟೆಂಬರ್ 23 ರಂದು ಶರದ್ ವಿಷುವ ಬಿಂದುವಿಗೂ ಬರುತ್ತಾನೆ. ಹಾಗೆಯೇ ಜೂನ್ 21 ರಂದು ಕರ್ಕಾಯನ ಬಿಂದುವಿಗೂ ಮತ್ತು ಡಿಸೆಂಬರ್ 21 ರಂದು ಮಕರಾಯನ ಬಿಂದುವಿಗೂ ಬರುತ್ತಾನೆ.

ಕರ್ಕಾಯನ ಬಿಂದುವಿನಿಂದ ಮಕರಾಯನ ಬಿಂದುವಿನ ಕಡೆಗೆ ದಕ್ಷಿಣ ದಿಕ್ಕಿನ ಸೂರ್ಯನ ಚಲನೆಯನ್ನು ದಕ್ಷಿಣಾಯಣ ಪುಣ್ಯಕಾಲವೆಂದೂ, ಮಕರಾಯನ ಬಿಂದುವಿಂದ ಕರ್ಕಾಯನ ಬಿಂದುವಿನ ಕಡೆಗೆ ಸೂರ್ಯನು ಚಲಿಸುವ ಉತ್ತರ ದಿಕ್ಕಿನ ಚಲನೆಯ ಕಾಲವನ್ನು ಉತ್ತರಾ ಯಣ ಪುಣ್ಯಕಾಲವೆಂದೂ ಕರೆಯುತ್ತೇವೆ. ಹಾಗಾಗಿ ಇದೇ ಡಿಸೆಂಬರ್ 21 ರಂದು ಸೂರ್ಯ ತನ್ನ ಪಥವನ್ನು ಬದಲಾಯಿಸಿದ್ದಾನೆ. ಅಂದರೆ ಭೂಮಿ ನಮಗೆ ಗೊತ್ತಿಲ್ಲದ ಹಾಗೆ ತನ್ನ ಪಥವನ್ನು ಬದಲಾಯಿಸುತ್ತದೆ. ಇಲ್ಲಿ ಸೂರ್ಯನ ಪಥದ ಬದಲಾವಣೆ ಗೋಚರವಾಗುವುದರಿಂದ ದಕ್ಷಿಣಾಯಣ ಮತ್ತು ಉತ್ತರಾಯಣ ಕಾಲಗಳು ಎಲ್ಲರಲ್ಲೂ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ. ಆದರೆ ನಾವು ಇಂಗ್ಲಿಷ್ ಪಂಚಾಂಗದ ಪ್ರಕಾರವೇ ಸಂಕ್ರಾಂತಿಯನ್ನು ಆಚರಿಸುತ್ತೇವೆ.


ಎಚ್.ಎಸ್.ಟಿ. ಸ್ವಾಮಿ
ಹವ್ಯಾಸಿ ಖಗೋಳ, ವೀಕ್ಷಕರು, ಚಿತ್ರದುರ್ಗ.
[email protected]

error: Content is protected !!