ಕೊರೊನಾ ಕತ್ತಲ ಕಳೆ ದೇವಕುಮಾರ

ಕೊರೊನಾ ವಾರಿಯರ್‌ಗಳಿಗೆ ಚರ್ಚ್‌ನಲ್ಲಿ ಅಭಿನಂದನೆ
ನಗರದ ಸಂತ ತೋಮಸರ ದೇವಾಲಯದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್‌ಗಳಿಗೆ ಅಭಿನಂದನೆ ಸಲ್ಲಿಸಲಾಗಿತ್ತು. ಚರ್ಚ್ ಆವರಣದಲ್ಲಿ ಯೋಧರು, ರೈತರು ಹಾಗೂ ಕೊರೊನಾ ವಾರಿಯರ್‌ಗಳನ್ನು ಗೌರವಿಸುವ ಮಾದರಿಗಳನ್ನೂ ನಿರ್ಮಿಸಲಾಗಿತ್ತು.

ಕೊರೊನಾ ವೈರಸ್‌ನಿಂದ ರೋಗಿಗಳನ್ನು ಗುಣಪಡಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಶುಶ್ರೂಷಕರು, ಪೊಲೀಸರು, ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರು ಇವರೆಲ್ಲರನ್ನು  ವಿಶ್ವ ರಕ್ಷಕರು, ಭಾರತದ ಯೋಧರು ಎಂದು ಹೃದಯ ಪೂರ್ವಕವಾಗಿ ಅಭಿನಂದಿಸುವ ಸಂದೇಶವನ್ನೂ ಅಳವಡಿಸಲಾಗಿತ್ತು.

ದಾವಣಗೆರೆ, ಡಿ. 24-ಕೊರೊನಾ ಹಿನ್ನೆಲೆ ಯಲ್ಲಿ ನಗರದ ಚರ್ಚ್‌ಗಳಲ್ಲಿ ಈ ಬಾರಿ ಸರಳ ಕ್ರಿಸ್‌ಮಸ್ ಆಚರಣೆ ನಡೆಯುತ್ತಿದೆ. ವೈಭವದ ಆಚರಣೆಯ ಬದಲು ಸರಳತೆ ಹಾಗೂ ಸಾಮಾಜಿಕ ಅಂತರದೊಂದಿಗೆ, ಕೊರೊನಾ ಶಿಷ್ಟಾಚಾರಗಳನ್ನು ಪಾಲಿಸಿ ಸೋಂಕಿನ ಸಂಕಷ್ಟ ನಿವಾರಿಸಲು ನಮನ ಸಲ್ಲಿಸಲಾಗುತ್ತಿದೆ.

ಕ್ರಿಶ್ಚಿಯನ್ ಬಾಂಧವರ ಅತಿ ದೊಡ್ಡ ಹಬ್ಬವಾದ ಕ್ರಿಸ್‌ಮಸ್ ಕೊರೊನಾ ಕಾಟದಿಂದಾಗಿ ಕಳೆಗುಂದಿದೆ. ಬ್ರಿಟನ್ ಮುಂತಾದ ದೇಶಗಳಲ್ಲಿ ತೀವ್ರವಾಗಿ ಹರಡುವ ಹೊಸ ರೂಪದ ಕೊರೊನಾ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ರಾತ್ರಿ ಕರ್ಫ್ಯೂ ಸಹ ಕ್ರಿಸ್‌ಮಸ್ ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದೆ.

ಕೊರೊನಾ ಶಿಷ್ಟಾಚಾರಗಳಿಗೆ ಅನುಗುಣವಾಗಿ ಚರ್ಚ್‌ಗಳಲ್ಲಿ ಆರಾಧನೆ ಹಾಗೂ ಪ್ರಾರ್ಥನಾ ಸ್ವರೂಪವನ್ನೂ ಸಹ ಬದಲಿಸಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ರೀತಿಯ ಕ್ರಮಗಳಿಗೆ ಚರ್ಚ್‌ಗಳು ಮುಂದಾಗಿವೆ. ನಗರದ ಸಂತ ತೋಮಸರ ದೇವಾಲಯದಲ್ಲಿ ತಡ ರಾತ್ರಿ ನಡೆಯುತ್ತಿದ್ದ ದೀಪ ನಮನವನ್ನು ಸಂಜೆ 7 ಗಂಟೆಗೇ ಆಯೋಜಿಸಲಾಗಿತ್ತು. ಏಸು ಕ್ರಿಸ್ತ ಭೂಮಿಯಲ್ಲಿ ಜನಿಸಿದ್ದು ಮಧ್ಯರಾತ್ರಿಯಾದ ಕಾರಣ, ಚರ್ಚ್‌ನಲ್ಲಿ ಮಧ್ಯರಾತ್ರಿಯ ವೇಳೆಯೇ ಆರಾಧನೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಆರಾಧನೆ, ಕೀರ್ತನೆ ಹಾಗೂ ಪ್ರವಚನಗಳನ್ನು ಸಂಜೆ 7ರಿಂದ 9ರ ಒಳಗೆ ಆಯೋಜಿಸಲಾಗಿದೆ.

ಪತ್ರಿಕೆಯೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ ಚರ್ಚ್‌ನ ಧರ್ಮಗುರುಗಳಾದ ಫಾದರ್ ಸ್ಟೀನ್ ದೆಸಾ, ಕೊರೊನಾ ಹಿನ್ನೆಲೆಯಲ್ಲಿ ಆಡಂಬರದ ಬದಲು ಸರಳ ಆಚರಣೆ ನಡೆಸಲಾಗುತ್ತಿದೆ. ಚರ್ಚ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರಾಧನಾ ಬಲಿ ಪೂಜೆಯನ್ನು ಮಧ್ಯರಾತ್ರಿಯ ಬದಲು, ಸಂಜೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಾಮಾಜಿಕ ಅಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕೊರೊನಾ ಶಿಷ್ಟಾಚಾರದ ಬಗ್ಗೆ ಮೊದಲೇ ತಿಳಿಸಲಾಗಿದೆ.  ಏಸು ಕ್ರಿಸ್ತ ಜನಿಸಿದ್ದನ್ನು ಬಿಂಬಿಸುವ ಗೋದಲಿಯನ್ನು ಈ ಬಾರಿ ಸರಳವಾಗಿ ರೂಪಿಸಲಾಗಿದೆ. ಕೊರೊನಾ ವಾರಿಯರ್‌ಗಳಿಗೆ ಗೌರವಿಸುವ ಮಾದರಿಗಳನ್ನು ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿದೆ ಎಂದವರು ಹೇಳಿದರು.

ದೇವಕುಮಾರ ಏಸು ಕ್ರಿಸ್ತ ಕೊರೊನಾ ತೊಲಗಿಸಲಿ, ಪ್ರಭುವಿನ ಆಗಮನದಿಂದ ಸಂಕಷ್ಟ ಬಗೆಹರಿಯಲಿ. ಅಶಾಂತಿ ತುಂಬಿದ ಸಮಾಜಕ್ಕೆ ಸಮಾಧಾನ ಸಿಗಲಿ ಎಂಬುದೇ ಈ ಬಾರಿಯ ಕ್ರಿಸ್‌ಮಸ್ ಆಚರಣೆಯ ಸಂದೇಶವಾಗಿದೆ ಎಂದವರು ತಿಳಿಸಿದರು.

ನಾಳೆ ಕ್ರಿಸ್‌ಮಸ್ ದಿನ ಬೆಳಿಗ್ಗೆ 9ಗಂಟೆಗೆ ಆರಾಧನೆಯನ್ನು ಕೈಗೊಳ್ಳಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಲು ಭಕ್ತರು ಸಾಧ್ಯವಾದಷ್ಟು ಚರ್ಚ್ ಹೊರಗಡೆ ಇರುವಂತೆ ನೋಡಿಕೊಳ್ಳಲಾಗುವುದು. ಹೊಸ ವರ್ಷಾಚರಣೆಯ ದಿನವೂ ಸಹ ಆರಾಧನೆ ಸರಳವಾಗಿರಲಿದೆ ಎಂದವರು ಹೇಳಿದರು.

ನಗರದ ಜಯನಗರದಲ್ಲಿರುವ ಡಿ.ಹೆಚ್.ಎಂ. ಚರ್ಚ್ ಸೇರಿದಂತೆ ಹಲವಾರು ಚರ್ಚ್‌ಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರವಚನ, ಕೀರ್ತನೆ ಹಾಗೂ ಆರಾಧನೆಗೆ ವ್ಯವಸ್ಥೆ ಮಾಡಲಾಗಿದೆ. 

ಕೊರೊನಾ ಹಿನ್ನೆಲೆಯಲ್ಲಿ ಚರ್ಚ್ ಒಳಗೆ ಹತ್ತು ವರ್ಷದೊಳಗಿನವರು ಹಾಗೂ 60 ವರ್ಷ ಮೀರಿದವರು ಮತ್ತು ಗರ್ಭಿಣಿಯರು ಬರಬಾರದು ಎಂದು ತಿಳಿಸಲಾಗಿದೆ ಎಂದು ಡಿ.ಹೆಚ್.ಎಂ. ಚರ್ಚ್‌ನ ಫಾಸ್ಟರ್ ರಾಜಶೇಖರ್ ತಿಳಿಸಿದ್ದಾರೆ.

error: Content is protected !!