ಜಗಳೂರು, ಡಿ.23- ಸಾಲ ಪಡೆದ ರೈತರು ಸಮ ಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ಮೂಲಕ ಹೊಸ ಸಾಲ ಪಡೆದುಕೊಳ್ಳಬೇಕು ಮತ್ತು ಬ್ಯಾಂಕಿನ ಪ್ರಗತಿಗೆ ಸಹಕರಿಸಬೇಕು ಎಂದು ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ಮಲ್ಲಿಕಾರ್ಜುನ ಬಾಬು ಮನವಿ ಮಾಡಿದರು.
ಪಟ್ಟಣದ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮರ್ಥ್ಯ ಇದ್ದರೂ ಸಹ ಸಾಲ ಮರುಪಾವತಿಸದೆ ಸುಸ್ತಿದಾರರಾಗಿದ್ದಾರೆ.ಅಂತಹವರು ತಪ್ಪದೇ ಸಾಲ ಮರುಪಾವತಿ ಮಾಡಬೇಕು.ಇತರೆ ರೈತರಿಗೆ ಸಾಲ ಸೌಲಭ್ಯ ದೊರೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ 2019-20 ಸಾಲಿನ ಆಡಳಿತ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಹಾಜರಿದ್ದ ಕೆಲವು ಸದಸ್ಯರು 5 ವರ್ಷಗಳಲ್ಲಿ ಮೂರು ಮಾಸಿಕ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಕನಿಷ್ಠ ವ್ಯವಹಾರ ನಡೆಸಬೇಕು. ಇಲ್ಲದಿದ್ದರೆ ಮತದಾನ ಮಾಡುವ ಮತ್ತು ಸ್ಪರ್ಧಿಸುವ ಹಕ್ಕು ಇರುವುದಿಲ್ಲ ಎಂಬ ಕಾನೂನಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೆ.ಬಿ. ಚೌಡಮ್ಮ, ನಿರ್ದೇಶಕರಾದ ಬಿ.ಡಿ. ಹನುಮಂತ ರೆಡ್ಡಿ, ಕೆ.ಬಿ. ಸಿದ್ದೇಶ್, ಎಂ.ವಿ. ರಾಜು, ಸೈಯದ್ ಕಲೀಂ, ಸಿದ್ದೇಶ್, ಚನ್ನಬಸಪ್ಪ, ಮಂಜಣ್ಣ, ಪುಷ್ಪ, ಬ್ಯಾಂಕ್ ವ್ಯವಸ್ಥಾಪಕ ಟಿ.ಎನ್. ಭೂಷಣ್ ಮತ್ತು ಸದಸ್ಯರು ಭಾಗವಹಿಸಿದ್ದರು.