ಕಾಯರ್ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮುಖ್ಯ

ಕಾಯರ್ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮುಖ್ಯ - Janathavani

ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ತೆಂಗು ನಾರಿನ ಉತ್ಪನ್ನಗಳ ಪ್ರದರ್ಶನ ಕೇಂದ್ರ ಹಾಗೂ ತರಬೇತಿ ಕೇಂದ್ರವನ್ನು ತೆರೆಯಲು ಕಾಯರ್ ಮಂಡಳಿ ಹೆಚ್ಚು ಉತ್ಸುಕವಾಗಿದೆ. ಈ ಕುರಿತು ಮಂಡಳಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ.

– ಸುಧೀರ್ ಗಾರ್ಗ್‌, ಕಾಯರ್ ಮಂಡಳಿ ಚೇರ್ಮನ್ 

ದಾವಣಗೆರೆ, ಡಿ.23- ತೆಂಗು ನಾರಿನ ಉದ್ಯಮ ಪ್ರಮುಖವಾಗಿ ರಫ್ತು ಮಾರ್ಗವನ್ನೇ ಹೆಚ್ಚು ಅವಲಂಬಿಸಿರುವುದರಿಂದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿ ಸುವುದು ಇಂದಿನ ಆದ್ಯತೆಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

 ಕಾಯರ್ ಮಂಡಳಿಯ 235 ನೇ ಆಡಳಿತ ಮಂಡಳಿ ಸಭೆಯ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳನ್ನು ಕೇಂದ್ರವನ್ನಾಗಿಸಿಕೊಂಡು ಫ್ರಾಂಚೈಸಿಗಳನ್ನು ಹೆಚ್ಚಳ ಮಾಡುವುದು, ಹೆಚ್ಚು ಹೆಚ್ಚು ಕಾಯರ್ ಕ್ಲಸ್ಟರ್‍ಗಳನ್ನು ರಚನೆ ಮಾಡುವತ್ತ ಗಮನ ಹರಿಸುವಂತೆ ಕಾಯರ್ ಮಂಡಳಿಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಹಿರಿಯೂರು ಸುತ್ತಮುತ್ತ ಸಿಗುವ ತೆಂಗಿನ ನಾರು ಅತಿ ಉತ್ಕೃಷ್ಟದ್ದಾಗಿದ್ದು ರಾಜ್ಯದಲ್ಲಿ ದೊರೆಯುವ ಯಾವುದೇ ತೆಂಗಿನ ನಾರಿಗೆ ಹೋಲಿಕೆ ಮಾಡಿದಾಗ ಅತಿ ಹೆಚ್ಚಿನ ಇಳುವರಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ತೆಂಗು ನಾರಿನ ಉತ್ಪನ್ನಗಳ ಪ್ರದರ್ಶನ ಕೇಂದ್ರ ಹಾಗೂ ತರಬೇತಿ ಕೇಂದ್ರವನ್ನು ತೆರೆಯುವಂತೆ ಹಾಗೂ ಅಗತ್ಯವಾದ 2 ಎಕರೆ ಜಮೀ ನನ್ನು ಒದಗಿಸುವುದಾಗಿ ಈ ಹಿಂದೆ ಕಾಯರ್ ಮಂಡಳಿಯ ಚೇರ್ಮನ್‌ಗೆ  ಮನವಿ ಮಾಡಲಾಗಿದ್ದು, ಈ ಸಂಬಂಧ ಮಾಹಿತಿ ಪಡೆದರು.

ಕಾಯರ್ ಮಂಡಳಿಯ ಛೇರ್ಮನ್ ಸುಧೀರ್ ಗಾರ್ಗ್ ಪ್ರತಿಕ್ರಿಯಿಸಿ, ಆ ಭಾಗ ದಲ್ಲಿ ನಾರಿನ ಉತ್ಪನ್ನಗಳನ್ನು ಹೆಚ್ಚು ಪರಿಚಯಿಸುವ ದೃಷ್ಟಿಯಿಂದ ಪ್ರದರ್ಶನ ಕೇಂದ್ರ ಹಾಗೂ ತರಬೇತಿ ಕೇಂದ್ರ ತೆರೆ ಯುವ ಬಗ್ಗೆ ಮಂಡಳಿ ಹೆಚ್ಚು ಉತ್ಸುಕತೆ ಹೊಂದಿದೆ. ಈ ಬಗ್ಗೆ ಮಂಡಳಿ ಸಕಾರಾ ತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಭೆಯಲ್ಲಿ ತಿಳಿಸಿದರು. ಈ ಕುರಿತು ವಿಸ್ತೃತವಾದ ವರದಿಯನ್ನು ಸಚಿವಾಲ ಯಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ಮಂಡಳಿ ಏರ್ಪಡಿಸಿದ್ದ ವೆಬಿನಾರ್‍ನಲ್ಲಿ ಚೇರ್ಮನ್ ಸುಧೀರ್ ಗಾರ್ಗ್, ಕಾರ್ಯದರ್ಶಿ ಕುಮಾರ ರಾಜ, ಲೋಕಸಭಾ ಸದಸ್ಯರೂ ಆದ ಮಂಡಳಿ ಸದಸ್ಯ ಡಾ. ವಿನಯ್ ಸಹಸ್ರಬುದ್ದೆ, ಆಡೂರ್ ಪ್ರಕಾಶ್, ಸದಸ್ಯರುಗಳಾದ ಜಿ.ಎಸ್.ಪ್ರಕಾಶ್, ಜಿ. ಚಂದ್ರಮೌಳಿ, ಕುಮಾರ್ ಗೋವಿಂದ್ ಗುಪ್ತಾ, ಎಸ್.ಕೆ. ಗೌತಮ್ ಇತರರು ಭಾಗವಹಿಸಿದ್ದರು.

error: Content is protected !!