ಅಪ್ರಾಪ್ತೆಯ ಬಾಲ್ಯ ವಿವಾಹ ತಡೆ

ದಾವಣಗೆರೆ, ಡಿ.23- ಅಪ್ರಾಪ್ತೆಯ ಮದುವೆಗೆ ಸಿದ್ಧತೆ ನಡೆದಿರುವ ಬಗ್ಗೆ  ಬಂದ ದೂರಿನ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ ಯಶಸ್ವಿಯಾಗಿದೆ. 

ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ 25 ವರ್ಷದ ಯುವಕನೊಂದಿಗೆ ಹರಿಹರ ನಗರದ ವಾರ್ಡೊಂದರ ಅಪ್ರಾಪ್ತ ಬಾಲಕಿ ಮದುವೆಗೆ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಸಹಾಯವಾಣಿಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್, ಸಹಾಯವಾಣಿ ಕಾರ್ಯಕರ್ತ ಡಿ. ಮಂಜುನಾಥ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶೈಲಾ ಎಸ್. ಮೈದೂರು ತಂಡವು ಅಪ್ರಾಪ್ತೆ ಮನೆಗೆ ಹೋಗಿ ಬಾಲಕಿಯ ತಾಯಿ, ಸಂಬಂಧಿಕರನ್ನು ಭೇಟಿ ಮಾಡಿ ಬಾಲ್ಯ ವಿವಾಹ ಮಾಡದಂತೆ ಮನವೊಲಿಸಿದರು. 

ಅಪ್ರಾಪ್ತ ಬಾಲಕಿಯ ಶಾಲಾ ದಾಖಲೆಯನ್ನು ಸಂಗ್ರಹಿಸಿ, ಪರಿಶೀಲಿಸಿದಾಗ ಬಾಲಕಿಯ ವಯಸ್ಸು 16 ವರ್ಷ 4 ತಿಂಗಳಷ್ಟೇ ಆಗಿತ್ತು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಮಾಡಿದರೆ 1 ಲಕ್ಷ ರೂ. ದಂಡ, 1 ವರ್ಷಕ್ಕೆ ಕಡಿಮೆ ಇಲ್ಲದಂತೆ 2 ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಾಗಲಿದೆ ಎಂಬ ವಿಚಾರವನ್ನು ಅಪ್ರಾಪ್ತೆಯ ತಾಯಿ, ಸಂಬಂಧಿಗಳಿಗೆ ಎಚ್ಚರಿಕೆ ನೀಡಿ, ಕಾನೂನು ಬಗ್ಗೆ ಅರಿವು ಮೂಡಿಸಲಾಯಿತು. 

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲ ಸಮ್ಮುಖದಲ್ಲಿ 20 ರು.ಗಳ ಛಾಪಾ ಕಾಗದದಲ್ಲಿ ಅಪ್ರಾಪ್ತೆಯ ತಾಯಿ ಹಾಗೂ ಸಂಬಂಧಿಗಳಿಂದ ಮುಚ್ಚಳಿಕೆ ಪತ್ರ ಪಡೆದಿದ್ದಾರೆ.

error: Content is protected !!