ಚಿನ್ನಾಭರಣ ದೋಚಿ ವಂಚನೆ
ದಾವಣಗೆರೆ, ಡಿ.23- ಪೊಲೀಸರ ಸೋಗಿನಲ್ಲಿ ಬಂದ ವಂಚಕರಿಬ್ಬರು ವಾಯು ವಿಹಾರ ಮುಗಿಸಿ ಮನೆಯತ್ತ ಸಾಗುತ್ತಿದ್ದ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಓರ್ವರ ಬಳಿ ಇದ್ದ ಒಂದು ಲಕ್ಷ ರೂ. ಮೌಲ್ಯದ ಬಂಗಾ ರದ ಸರ, ಉಂಗುರವನ್ನು ಮಂಕು ಬೂದಿ ಎರಚಿ ದೋಚಿ ಪರಾರಿ ಯಾಗಿರುವ ಘಟನೆ ಇಲ್ಲಿನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿಂದು ಹಾಡಹಗಲೇ ನಡೆದಿದೆ.
ಎಂಸಿಸಿ ಎ ಬ್ಲಾಕ್ ವಾಸಿ ಎನ್.ಆರ್. ಮಂಜುನಾಥ ರಾವ್ ವಂಚನೆಗೊಳಗಾದ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್. ಎಂದಿನಂತೆ ಬೆಳಗ್ಗೆ 8 ಗಂಟೆಗೆ ವಾಯು ವಿಹಾರಕ್ಕೆ ಬಂದು ವಾಪಸ್ 9-15 ಗಂಟೆಗೆ ಮನೆ ಕಡೆಗೆ ಎಂಸಿಸಿ ಎ ಬ್ಲಾಕ್ 7ನೇ ಮೇನ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಬಂದ ವಂಚಕರಿಬ್ಬರು ಪೊಲೀಸರೆಂದು ನಂಬಿಸಿ ಬಂಗಾರವನ್ನು ಹಾಕಿಕೊಂಡು ಹೋಗಬಾರದೆಂದು ಹೇಳಿ ಕಾಳಜಿ ತೋರುವವರಂತೆ ನಟಿಸುತ್ತಾ, ಕೊರಳಲ್ಲಿದ್ದ 15 ಗ್ರಾಂ ತೂಕದ ಒಂದು ಎಳೆಯ 45 ಸಾವಿರ ಮೌಲ್ಯದ ಬಂಗಾರದ ಸರ, 8 ಗ್ರಾಂ ತೂಕದ 25 ಸಾವಿರ ಮೌಲ್ಯದ ಬಂಗಾರದ ನವರತ್ನದ ಹಾರ ಹಾಗೂ ಕೈ ಬೆರಳಲ್ಲಿದ್ದ 10 ಗ್ರಾಂ ತೂಕದ 30 ಸಾವಿರ ಮೌಲ್ಯದ ಬಂಗಾರದ ನವಗ್ರಹದ ಒಂದು ಉಂಗುರ, ವಾಚ್, ಮೊಬೈಲ್ ತೆಗೆಸಿ ಕರವಸ್ತ್ರದಲ್ಲಿ ಹಾಕಿ ಕೊಟ್ಟಂತೆ ನಾಟಕವಾಡಿ ಬೈಕಿನಲ್ಲಿ ಜೋರಾಗಿ ಪರಾರಿಯಾಗಿದ್ದಾರೆ. ನಂತರ ಕರವಸ್ತ್ರವನ್ನು ತೆಗೆದು ನೋಡಿದಾಗ ಬಂಗಾರದ ಆಭರಣಗಳು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.