ಮೊದಲ ಹಂತದ ಮತದಾನ ಶಾಂತಿಯುತ

ದಾವಣಗೆರೆ ಶೇ.85.54, ಜಗಳೂರು ಶೇ.83.96, ಹೊನ್ನಾಳಿ ಶೇ.86.32 ಮತದಾನ

ದಾವಣಗೆರೆ, ಡಿ.22- ಗ್ರಾಮಗಳ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮೊದಲ ಹಂತದಲ್ಲಿ ಮೂರು ತಾಲ್ಲೂಕುಗಳಲ್ಲಿ ನಡೆದ ಪಂಚಾಯ್ತಿ ಚುನಾವಣೆ ಯಲ್ಲಿ ಶೇ.85.27ರಷ್ಟು ಮತದಾನವಾಗಿದೆ.

 ದಾವಣಗೆರೆಯ 38, ಹೊನ್ನಾಳಿಯ 28 ಹಾಗೂ ಜಗಳೂರಿನ 22 ಗ್ರಾ.ಪಂ.ಗಳಿಗೆ ಮಂಗಳ ವಾರ ಚುನಾವಣೆ ಶಾಂತಿಯುತ ವಾಗಿ ನಡೆಯಿತು. 

ದಾವಣಗೆರೆ ತಾಲ್ಲೂಕಿನಲ್ಲಿ ಶೇ85.54, ಜಗಳೂರು ಶೇ.83.96 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ಶೇ.86.32 ರಷ್ಟು ಮತದಾನವಾಗಿದೆ.

ಹಳ್ಳಿಗಳಲ್ಲಿ ಬೆಳಿಗ್ಗೆಯಿಂದಲೇ ಚುನಾವಣಾ ಕಣ ರಂಗೇರಿತ್ತು.  ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಹಿಳೆಯರು ಚಿಕ್ಕ ಮಕ್ಕಳೊಂದಿಗೆ ಬಂದು ಹಕ್ಕು ಚಲಾಯಿಸಲು ಸರದಿಗೆ ನಿಂತರೆ, ವಯಸ್ಸಾದವರೂ ತಾವೇನು ಕಡಿಮೆ ಎಂಬಂತೆ ಹುಮ್ಮಸ್ಸಿನಿಂದಲೇ ಆಗಮಿಸಿದ್ದರು.

ಯುವಕರು ಮತದಾರರನ್ನು ಕರೆತರುವಲ್ಲಿ ತಲ್ಲೀನ ರಾಗಿದ್ದರು.  ಅಲ್ಲಲ್ಲಿ ಗುಂಪುಗಳು, ಆಟೋ, ಬೈಕುಗಳಲ್ಲಿ ಮತದಾರರನ್ನು ಕರೆ ತರುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಬೆಳಿಗ್ಗೆಯೇ ಮತ ಚಲಾಯಿಸಿ ಕೆಲಸ ಕಾರ್ಯಗಳಿಗೆ ಹೊರಡುವ ಹಳ್ಳಿಗರ ನಿರ್ಧಾರವೂ ಸರದಿ ಸಾಲು ಉದ್ದವಾಗಲು ಕಾರಣವಾಗಿತ್ತು. ಮತ ಕೇಂದ್ರಗಳ ಸಮೀಪ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಗುಂಪು ಮತದಾರರ ಓಲೈಕೆಗೆ ಕೊನೆ ಕ್ಷಣದ ಕಸರತ್ತು ನಡೆಸುತ್ತಲೇ ಇತ್ತು. 

ಅಣಜಿ ಗ್ರಾಮ ಪಂಚಾಯ್ತಿಯ ಮೆಳ್ಳೇಕಟ್ಟೆ ಗ್ರಾಮದ ಮತ ಕೇಂದ್ರ ಸಂಖ್ಯೆ 35ರಲ್ಲಿ ಬೆಳಿಗ್ಗೆ 9 ಗಂಟೆಗೆ 917 ಜನರ ಪೈಕಿ 90 ಜನ ಮತ ಚಲಾಯಿಸಿದ್ದರು.

ಪ್ರಥಮಬಾರಿ ಹಕ್ಕು ಚಲಾಯಿಸಿದ ಸಂಭ್ರಮ:  ಮೆಳ್ಳೆಕಟ್ಟೆ ಗ್ರಾಮದ ಎಸ್. ನಾಗಮ್ಮ ಪ್ರಥಮ ಬಾರಿಗೆ ಮತದಾನ ಮಾಡಿದರು. ಈ ವೇಳೆ  ಪತ್ರಕರ್ತರೊಂದಿಗೆ ತಮ್ಮ ಸಂತಸ ಹಂಚಿಕೊಳ್ಳುತ್ತಾ, ಊರಿನ ಅಭಿವೃದ್ಧಿಗೆ ಮತ ಚಲಾಯಿಸಿದ್ದೇನೆ.  ಪ್ರಥಮ ಮತದಾನ ಸಂತಸ ತಂದಿದೆ ಎಂದರು.

ಬೆಳಿಗ್ಗೆ 10 ಗಂಟೆ ವೇಳೆಗೆ ಅಣಜಿ 1ನೇ ವಾರ್ಡ್‌ ಮತಗಟ್ಟೆ ಸಂಖ್ಯೆ 31ರ 565 ಮತದಾರರ ಪೈಕಿ 148 ಜನ ಹಕ್ಕು ಚಲಾಯಿಸಿದ್ದರು.  9 ಗಂಟೆಗೆ ಕೇವಲ 52 ಜನ ಮತ ಚಲಾಯಿಸಿದ್ದರು.

ಬಿಳಿಚೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ ಕೇಂದ್ರ ಸಂಖ್ಯೆ 128ರಲ್ಲಿ ಬೆಳಿಗ್ಗೆ 11.30ರ ವೇಳೆಗೆ 630 ಮತದಾರರ ಪೈಕಿ 225 ಜನ ಮತ ಚಲಾಯಿಸಿದ್ದರು.

ಬಾಗಿಲು ಮುಚ್ಚಿದ  ಸೆಕ್ಚರ್ ಅಧಿಕಾರಿ: ಮುಚ್ಚನೂರು ಗ್ರಾಮದ ಮತ ಕೇಂದ್ರದಲ್ಲಿ ಮಾಹಿತಿ ಪಡೆಯಲೆಂದು ತೆರಳಿದ್ದ ಪತ್ರಕರ್ತರೊಂದಿಗೆ ಮಾತಿನ ಚಕಮಕಿಗೆ ಇಳಿದ ಸೆಕ್ಟರ್ ಅಧಿಕಾರಿ ಮತ ಕೇಂದ್ರದ ಬಾಗಿಲು ಮುಚ್ಚಿದ ಘಟನೆ ನಡೆಯಿತು. ವಾಗ್ವಾದ ನಡೆಯುವಾಗ ಜನರು ಗುಂಪಾಗಿದ್ದನ್ನು ನೋಡಿ ಪೊಲೀಸರು ಜನರನ್ನು ಹೊರ ಕಳುಹಿಸಲು ಮುಂದಾದಾಗ ಅವಸರ ಪಟ್ಟ ವೃದ್ದೆಯೊಬ್ಬರು ಬೈಕ್ ನಿಂದ ಬಿದ್ದ ಘಟನೆಯೂ ನಡೆಯಿತು.

error: Content is protected !!