ರಾಮಕೃಷ್ಣ ವಿವೇಕಾನಂದಾಶ್ರಮದಿಂದ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಣೆ

ಹರಿಹರ, ಡಿ.19- ನಗರದ ರಾಮಕೃಷ್ಣ ವಿವೇಕಾನಂದಾಶ್ರಮದಲ್ಲಿ ಶುಕ್ರವಾರ ದಿನಪತ್ರಿಕೆ ವಿತರಣೆ ಮಾಡುವ ಹುಡುಗರಿಗೆ ಜರ್ಕಿನ್‍ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಾರದೇಶಾನಂದ ಸ್ವಾಮೀಜಿ ಮಾತನಾಡಿ, ಹೆಸರಾಂತ ಕ್ಷಿಪಣಿ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ದಿ. ಎಪಿಜೆ ಕಲಾಂ ಅವರೂ ಕೂಡ ತಮ್ಮ ಬಾಲ್ಯಾವಸ್ಥೆಯಲ್ಲಿ ತಮಿಳುನಾಡಿನಲ್ಲಿ ನಿತ್ಯ ದಿನಪತ್ರಿಕೆಗಳನ್ನು ಮನೆ, ಮನೆಗೆ ತೆರಳಿ ಹಂಚಿಕೆ ಮಾಡುತ್ತಿದ್ದರು ಎಂದರು.

ಆರ್ಥಿಕ ತೊಂದರೆ ಅಥವಾ ಹವ್ಯಾಸಕ್ಕೆಂದು ದಿನಪತ್ರಿಕೆಗಳನ್ನು ಹಂಚಿಕೆ ಮಾಡುವ ಕೆಲಸ ಮಾಡುತ್ತೀರಿ. ಬೆಳಗಿನ ಜಾವ ಚಳಿ, ಮಳೆ ಲೆಕ್ಕಿಸದೆ ಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಹಂಚಿಕೆ ಮಾಡುವ ಮಹತ್ವದ ಕೆಲಸವನ್ನು ಈ ಬಾಲಕರು ಮಾಡುತ್ತಿದ್ದಾರೆ.

ಬೆಳಗಿನ ಚಳಿ ಗಾಳಿ, ಮಳೆಯಿಂದ ಆರೋಗ್ಯಕ್ಕೆ ತೊಂದರೆಯಾಗಬಾರದೆಂದು ದಾನಿಗಳ ಸಹಕಾರ ಪಡೆದು, ಮಠದಿಂದ ಈ ದಿನ 25 ಹುಡುಗರಿಗೆ ಜರ್ಕಿನ್ ವಿತರಣೆ ಮಾಡಲಾಗಿದೆ. ಜೀವನಾನುಭವ ನೀಡುವ ಈ ಕಾರ್ಯ ಮಾಡುತ್ತಾ ಉತ್ತಮವಾಗಿ ಓದಿ ಸಮಾಜ ಗುರುತಿಸುವಂತಹ ಸ್ಥಾನ ಪಡೆಯಬೇಕು ಎಂದು ಕರೆ ನೀಡಿದರು.

ಜರ್ಕಿನ್ ದಾನಿಯಾದ ಗಿರಿಯಮ್ಮ ಪಿಯು ಕಾಲೇಜಿನ ಪ್ರಾಚಾರ್ಯರಾದ ಸುಜಾತ ಸುಬ್ರಹ್ಮಣ್ಯ ಮಾತನಾಡಿ, `ಲರ್ನಿಂಗ್ ವಿತ್ ಅರ್ನಿಂಗ್’ ಎಂಬ ಗಾದೆ ಮಾತಿನಂತೆ ತಾವೆಲ್ಲರೂ ಕೆಲಸ ಮಾಡುತ್ತಿದ್ದೀರಿ. ಹಣ ಗಳಿಕೆಯ ಮಹತ್ವ ತಿಳಿದಿರುವ ನಿಮಗೆ ಬದುಕಿನಲ್ಲಿ ಸಾಧನೆ ಮಾಡುವ ಛಲ ಸಹಜವಾಗಿ ಮೂಡಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಹಿರಿಯ ಪತ್ರಿಕಾ ವಿತರಕ ಬಿ.ಎಂ.ಚಂದ್ರಶೇಖರ್ ಮಾತನಾಡಿ, ಪತ್ರಿಕೆ ಹಂಚಿಕೆ ಮಾಡಿದ ವಿದ್ಯಾರ್ಥಿಗಳು ನ್ಯಾಯಾ ಧೀಶರು, ಉಪನ್ಯಾಸಕರು, ಚಾರ್ಟರ್ಡ್ ಅಕೌಂಟೆಂಟ್, ವಕೀಲರು ಇತರೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಉದಾಹರಣೆಗಳೊಂದಿಗೆ  ತಿಳಿಸಿದರು. 

ಗೋಪಾಲಕೃಷ್ಣ, ಪತ್ರಿಕಾ ವಿತರಕರಾದ ಶಿವಕುಮಾರ್ ಸೊಲ್ಲಾಪುರ, ಶಂಭುಲಿಂಗ ಸೇರಿದಂತೆ ಪತ್ರಿಕೆ ವಿತರಣೆ ಮಾಡುವ ಹುಡುಗರಿದ್ದರು.

error: Content is protected !!