ಆಟದ ಸೊಬಗು ಆಟವಾಡುವ ವರಿಗಿಂತ ನೋಡುವವರಿಗೆ ಚೆನ್ನಾಗಿ ತಿಳಿಯುತ್ತದೆ ಎಂಬಂತೆ ಹಳ್ಳಿಯ ಸೊಬಗು-ಸಡಗರ-ಕುಂದುಕೊರತೆಗಳು ಹೊರಗಿನಿಂದ ನೋಡುವವರಿಗೆ ಎದ್ದು ಕಾಣುತ್ತದೆ. ನಮ್ಮ ದೇಶ ಮುಖ್ಯವಾಗಿ ಹಳ್ಳಿಗಳ ದೇಶ. ಇದನ್ನು ನೇಗಿಲ ಯೋಗಿಗಳ ತವರು ಮನೆಯೆಂದು ಕುವೆಂಪು ಕವಿತೆಯಲ್ಲಿ ವರ್ಣಿಸಿದ್ದಾರೆ. ಅಂದರೆ ಯೋಗಿಯು ಎಷ್ಟೇ ತೊಂದರೆ ಬಂದರೂ ಯೋಗಾಭ್ಯಾಸ ಬಿಡದೇ ನಿರತನಾಗಿರುತ್ತಾನೆಯೋ ಹಾಗೆಯೇ ರೈತನು ಎಷ್ಟೇ ಕಷ್ಟಗಳು ಬಂದರೂ ಹಿಂಜರಿಯದೇ ಬೇಸಾಯವನ್ನು ನಂಬಿ ತನ್ನ ಬಾಳಿನ ಸಾಧನೆಗೈಯ್ಯುತ್ತಾನೆ. ರೈತನೆಂದರೆ ಆದಿಶೇಷನ ಹಾಗೆ. ಆದಿಶೇಷನು ಹೇಗೆ ಭೂ ಭಾರವನ್ನು ಹೊತ್ತು ಕೇವಲ ಗಾಳಿಯಿಂದಲೇ ಜೀವಿಸುತ್ತಾನೆಯೋ ಹಾಗೆಯೇ ನಮ್ಮ ರೈತನು ಕೂಡಾ ಸಮಾಜಕ್ಕಾಗಿ ನಿರಂತರ ದುಡಿದು ತಾನು ಮಾತ್ರ ಸ್ವಲ್ಪ ಸೊಪ್ಪು, ರಾಗಿ ಹಿಟ್ಟಿನಿಂದ ಜೀವನ ನಡೆಸುತ್ತಾನೆ. ಆದ್ದರಿಂದ ಹಳ್ಳಿಗಳ ಚುನಾವಣೆ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವುದು ಪ್ರಸ್ತುತ ಅಗತ್ಯವಾಗಿದೆ.
ನಮ್ಮ ದೇಶದ ನಾಗರಿಕತೆಯ ಕೇಂದ್ರ ಗಳೆಂದರೆ ಹಳ್ಳಿಗಳೇ. ಮೈಸೂರಿನ ಸುಪ್ರಸಿದ್ದ ದಿವಾನರಲ್ಲೊಬ್ಬರಾದ ಸರ್ ಎಂ. ವಿಶ್ವೇಶ್ವ ರಯ್ಯನವರು ತಮ್ಮ Planned Economy for India ಎಂಬ ಕೃತಿಯಲ್ಲಿ ದೇಶ ಏಳಿಗೆಯಾಗಬೇಕಾದರೆ ಹಳ್ಳಿಗಳ ಉದ್ಧಾರ ವಾಗಬೇಕೆಂದರು. ಸರ್ ಮಿರ್ಜಾ ಇಸ್ಮಾಯಿಲ್ರವರು ಗ್ರಾಮಗಳ ಉದ್ಧಾರ ಕ್ಕಾಗಿ ಅವಿಶ್ರಾಂತವಾಗಿ ದುಡಿದರು. ಗಾಂಧೀ ಜಿಯವರು ಹಳ್ಳಿಗಳ ಮಹತ್ವವನ್ನು ಸಾರುವು ದಕ್ಕಾಗಿ ಕಾಂಗ್ರೆಸ್ ಅಧಿವೇಶನಗಳನ್ನು ಹಳ್ಳಿಗಳಲ್ಲೇ ನಡೆಸಿದವರು. ಈ ಉದ್ದೇಶವನ್ನು ಇನ್ನೂ ವಿಶದವಾಗಿ ಬೋಧಿಸಲು ಅವರು ‘ಹಳ್ಳಿಗಳ ಕೈಗಾರಿಕಾ ಅಭಿವೃದ್ಧಿ ಸಂಘ’ ಎಂಬುದನ್ನು ಸ್ಥಾಪಿಸಿ ತಾವು ಪಟ್ಟಣವನ್ನು ಬಿಟ್ಟು ಷೇಗಾಂವ್ ಎಂಬ ಹಳ್ಳಿಯಲ್ಲಿ ಮಹರ್ಷಿಯಂತೆ ವಾಸಿಸಿದರು. ‘ಹಿಂದಿನ ಇತಿಹಾಸವು ಮುಂದಿನ ಏಳಿಗೆಗೆ ತಳಹದಿ’ ಎಂಬಂತೆ ಮಾರ್ಗದರ್ಶಕವಾಗಬೇಕು ಎಂದು ಸರ್ ಚಾರ್ಲಸ್ ಮೆಟ್ ಕಾಪ್ ತಿಳಿಸುವುದರ ಜೊತೆಗೆ ಪ್ರತಿ ಹಳ್ಳಿಯು ಸ್ವ-ಸಂಪೂರ್ಣತೆಯನ್ನು ಪಡೆದಿದ್ದ ಒಂದು ಪ್ರಜಾಪ್ರಭುತ್ವವೆಂದು ಸ್ತುತಿಸಿದರು. ನಮ್ಮ ದೇಶದಲ್ಲಿ ಅನೇಕ ರಾಜರು ಆಳಿದರು; ಅಳಿದರು, ಚಕ್ರಾಧಿಪತ್ಯಗಳು ಏರಿದವು; ಉರುಳಿದವು, ಹೊರದೇಶದವರು ದಾಳಿ ನಡೆಸಿ ದೋಚಿಕೊಂಡು ಹೋದರು. ಆದರೂ ನಮ್ಮ ಹಳ್ಳಿಗಳು ಬೆಳೆಯುತ್ತಲೇ ಇದ್ದವು. ‘ರಾಯರಿಗೆ ರಾಜ್ಯವಾಗದೇ ನಮಗೆ ರಾಗಿ ಬೀಸುವುದು ತಪ್ಪಿತೇ’ ಎಂಬ ನಾಣ್ಣುಡಿ ಜೀವಂತವಾಗಿತ್ತು. ಗ್ರೀಕರ ಇತಿಹಾಸದಲ್ಲಿ ಕಂಡು ಬರುವ (ಸಿಟಿ ಸ್ಟೇಟ್ಸ್) ನಗರ ಪ್ರಭುತ್ವಗಳಂತೆ ಇದ್ದವು ಹಳ್ಳಿಗಳು. ಜೀವನ ಕ್ರಮದಲ್ಲಿ ಸಮರ್ಪಕವಾದುದೊಂದು ವ್ಯವಸ್ಥೆ ಇತ್ತು. ಜೀವನಕ್ಕೆ ಬೇಕಾದ ಸಾಧನ-ಸೌಕರ್ಯಗಳನ್ನೆಲ್ಲಾ ತಾವೇ ಕಲ್ಪಿಸಿಕೊಳ್ಳುತ್ತಿದ್ದರು. ತಮಗೆ ಬೇಕಾದ ಪದಾರ್ಥಗಳೆಲ್ಲವನ್ನೂ (Subsistence Farming) ಸ್ವ ಪ್ರಯತ್ನದಿಂದಲೇ ಹೊಂದಿಸಿಕೊಳ್ಳುತ್ತಿದ್ದರು. ಅಲ್ಲದೇ ‘ಬಾರಾ ಬಲೂತಿ’ ವ್ಯವಸ್ಥೆಯನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡಿದ್ದರು ಎನ್ನುವುದನ್ನು ವರ್ತಮಾನ ಕಾಲದ ಇಂದಿನ ಗ್ರಾಮಗಳಲ್ಲಿ ಜೀವಂತವಾಗಿ ಕಾಣಬಹುದು.
ಗ್ರಾಮದ ಪ್ರಜೆಗಳ ಜಾಗೃತಿಗನುಗುಣ ವಾಗಿ ಮೈಸೂರಿನಲ್ಲಿ 1914 ರಲ್ಲಿ ಜಾರಿಗೆ ಬಂದ ಗ್ರಾಮೋಜ್ಜೀವನ ಯೋಜನೆ ಮತ್ತು ಇತರೆ ಕಾನೂನುಗಳನ್ನು ಕ್ರೋಢೀಕರಿಸಿ 1926 ರಲ್ಲಿ ಗ್ರಾಮ ಪಂಚಾಯಿತಿಗಳ ಕಾನೂನನ್ನು Village Panchayath Regulation ಜಾರಿಗೆ ತರಲಾಯಿತು. ಹಳ್ಳಿಗಳಲ್ಲಿ ನಡೆಯಬೇಕಾಗಿರುವ ಗ್ರಾಮಾಭಿ ವೃದ್ಧಿ ಕಾರ್ಯಗಳನ್ನು ಗ್ರಾಮದವರೇ ಮಾಡಿ ಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಯನ್ನು ಜಾರಿಗೊಳಿಸಲಾಯಿತು. ಹಳ್ಳಿಗರು ಆಡಳಿತವನ್ನು ಸಮರ್ಪಕವಾಗಿ ನಡೆಸಬಲ್ಲರೆಂದು ದೃಢವಾಗುವ ವರೆಗೂ ಪ್ರಜಾಸತ್ಯಾತ್ಮಕ ಸರ್ಕಾರವು ಬರಲಾರದೆಂಬುದನ್ನು ದೃಢವಾಗಿ ತಿಳಿಯಲಿ ಹಾಗೂ ಪಂಚಾಯಿತಿಗಳನ್ನು ಪ್ರಜಾಸೇವೆಯ ದೇವಾಲಯಗಳೆಂದು ಸರ್ ಬ್ರಜೇಂದ್ರನಾಥ ಸೀಲ್ ಹೇಳಿದರು.
ಮಾನವ ನಿರ್ಮಿತ ಪಕ್ಷಗಳೆಲ್ಲವೂ ಅಪೂರ್ಣವಾದವು. ಗ್ರಾಮ ಪಂಚಾಯಿತಿ ಚುನಾವಣೆಯು ಇದಕ್ಕೆ ಅಪವಾದವಲ್ಲ. ಪ್ರತಿಯೊಂದನ್ನು ಸ್ವಾಭಾವಿಕ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾ ಗಿದೆ. ಅಲ್ಲದೇ ಯಾವುದೊಂದು ಧೋರಣೆಗೆ ಅಥವಾ ಅಭಿಪ್ರಾಯಕ್ಕೆ ಬಹುಜನ ಸಮ್ಮತಿಯನ್ನು ದೊರಕಿಸಿಕೊಳ್ಳಬೇಕಾದ ಪ್ರಚಾರ ಸಾಧನವನ್ನು ನೀಡಬೇಕಾಗಿದೆ. ವಿಶಾಲವಾದ ರಾಜ್ಯದಲ್ಲಿ ಚುನಾವಣೆಗಳು ನಿರ್ವಾಚಕರಿಗೆ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಆಧುನಿಕ ಸಮಾಜದ ಸಮಸ್ಯೆಗಳು ದಿನದಿನಕ್ಕೂ ಕ್ಲಿಷ್ಟಕರವಾಗಿ ರೂಪಗೊಳ್ಳುತ್ತಿರುವುದರಲ್ಲಿ ಸಾಮಾನ್ಯ ಗ್ರಾಮೀಣ ಜ್ಞಾನ ಸಂಚಯವು ಚುನಾವಣಾ ತಿಳುವಳಿಕೆಗೆ ಸಾಲದಾಗಿದೆ. ಪ್ರಜಾಪ್ರಭುತ್ವಕ್ಕೆ ಅವಶ್ಯಕವಾಗಿ ಬೇಕಾದ ತರಬೇತಿ, ಶಿಕ್ಷಣ ಮತ್ತು ಅನುಭವವೆಲ್ಲವನ್ನೂ ಗ್ರಾಮೀಣ ಜನರಿಗೆ ನೀಡಬೇಕಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗಳು, ಪ್ರಜಾಪ್ರಭುತ್ವದ ಸತ್ವವನ್ನೇ ಸ್ವಾಹ ಮಾಡುತ್ತಾ ಸಾಮಾಜಿಕ ಅನಿಷ್ಟಗಳ ನಿರ್ಮೂಲನೆಗಾಗಿ ಪ್ರಯತ್ನಿಸಬೇಕಾಗಿದೆ. ಕಲ್ಯಾಣ ಗ್ರಾಮದ ಕಲ್ಪನೆಯು ಜಾತಿ, ವರ್ಣ, ಪಂಗಡ ಹಾಗೂ ಕೋಮು ಆಧಾರಿತ ಎಲ್ಲಾ ದ್ವೇಷ ಪ್ರೇರಕವಾದ ಭೇದ-ಭಾವಗಳನ್ನು ಹತ್ತಿಕ್ಕಬೇಕಾಗಿದೆ. ಇಂದು ಮಾನವೀಯ ವ್ಯಕ್ತಿತ್ವದ ಮೂಲ ಮೌಲ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಹಾಗೂ ಹುಟ್ಟು ಮತ್ತು ವ್ಯಕ್ತಿಯಾಧಾರಿತ ಸಾಮಾಜಿಕ ಕಳಂಕದ ವಿರುದ್ಧ ಸಿಡಿದೇಳಬೇಕಾಗಿದೆ.
ಚುನಾವಣೆಯ ಮೂಲಕ ಪ್ರತಿನಿಧಿಗಳು ಅಶಿಕ್ಷಿತ ಸಾರ್ವಜನಿಕ ಅಭಿಪ್ರಾಯವನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳಲೋಸುಗ ಅತಿ ಕ್ಲಿಷ್ಟ ಸಮಸ್ಯೆಗಳನ್ನು ಬೆಳೆಸುತ್ತಾ ತಮ್ಮ ತಮ್ಮ ನೇರಕ್ಕೆ ಪ್ರಚುರಪಡಿಸುತ್ತಾರೆ. ಮತದಾರರನ್ನು ಮುಗ್ಧಗೊಳಿಸಿ ಮತಗಳನ್ನು ದೋಚಿಕೊಂಡು ಹೋಗುವ ಗಾರುಡಿ ವಿದ್ಯೆಯನ್ನು ಶಾಸ್ತ್ರೀಯವಾಗಿ ಬೆಳೆಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ ಸ್ಥಿತಿಯಾಗಿದೆ. ಮತದಾರರಲ್ಲಿ ಸ್ವಭಾವ ಜನ್ಯವಾದ ಆಸೆ, ನಿರಾಶೆ, ಕ್ರೌರ್ಯ ಮುಂತಾದ ಪ್ರವೃತ್ತಿಗಳನ್ನೇ ಹೆಚ್ಚು ಎಚ್ಚರಗೊಳಿಸಿ, ಅವನನ್ನು ಉದ್ದೇಶಿಸಿ ಒಕ್ಕಟ್ಟಿಗೆ ಭಂಗ ತಂದು ಚುನಾವಣಾ ನಿಯಮಗಳನ್ನು, ಧೋರಣೆಗಳನ್ನು, ವ್ಯಕ್ತಿಯ ನಿಷ್ಠೆಯನ್ನು ಸಹಜವಾಗಿ ಸಾರ್ವಭೌತ್ವವನ್ನು ಸಾಧಿಸಲು ಹೊಂಚು ಹಾಕುವುದನ್ನು ಕಾಣಬಹುದಾಗಿದೆ. ನಮ್ಮ ದೇಶದಲ್ಲಿ ದುರಾದೃಷ್ಟವಶಾತ್ ಸ್ಥಳೀಯ ಸಂಸ್ಥೆಗಳು ರಾಜಕೀಯ ಪಕ್ಷಗಳ ಜಂಜಾಟಕ್ಕೆ ಸಿಕ್ಕಿ ಗ್ರಾಮ ಜೀವನದ ಅಭಿವೃದ್ಧಿಗೆ ನೀಡಬೇಕಾದ ನೆರವನ್ನು ನೀಡಲಾರದಾಗಿವೆ.
ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿ ಹಾಗೂ ವಿಕಾಸಗಳಿಗೆ ಚುನಾವಣೆಯ ಮೂಲಕ ಸ್ಪರ್ಧೆಗೊಳಗಾಗಿ ಪ್ರತಿನಿಧಿಗಳು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಯೋಜನೆ ಮತ್ತು ಯೋಚನೆ ಮಾನವನು ಹುಟ್ಟಿದಾಗಿನಿಂದಲೂ ನಡೆದುಬಂದ ಗುಣಗಳಾಗಿರುತ್ತವೆ. ಆದರೆ, ಅವು ಸುಸಜ್ಜಿತ ರೀತಿಯಲ್ಲಿ ನಡೆದು ಬಾರದೇ ಇದ್ದಾಗ ಅವುಗಳಿಗೆ ಹೊಸ ಸ್ವರೂಪವನ್ನು ಕೊಟ್ಟು ಸುಸಜ್ಜಿತತನಕ್ಕೆ ಕ್ರಮ ಪ್ರಾಪ್ತವಾಗುವಂತೆ ಮಾಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ವಚನಕಾರರು, ದಾಸರು, ಸಂತರು, ಅವಧೂತರು, ಸೂಫಿಗಳು ನಮ್ಮ ನಾಡನ್ನು ‘ನೆಮ್ಮದಿಯ ನಾಡು’ (Welfare State)ಆಗುವಂತೆ ಮತ್ತು ‘ಆದರ್ಶ ರಾಜ್ಯವು (Ideal State)’ ಆಗುವಂತೆ ಮಾಡಲು ಶತಪತ ಪ್ರಯತ್ನಿಸಿದ ಸಾಕ್ಷಿಭೂತವೇ ಅವರ ಸಾಹಿತ್ಯ. ಆಯ್ಕೆಯಾದ ಪ್ರತಿನಿಧಿಗಳು ಕಾರ್ಯೋನ್ಮುಖರಾಗಿ, ಸಮಾಜ ಪ್ರೇಮಿಗಳಾಗಿ ಮಾನವ ಕುಲ ಪ್ರೇಮಿಗಳಾಗಿ ಸ್ವತಂತ್ರ ವಿಚಾರವಾದಿಗಳಾಗಿ ಸತ್ಯ ನಿಷ್ಠರಾಗಿ ಯೋಜಕರಾಗಿ, ರಾಜಕಾರಣಿಗಳಾಗಿ (States Man) ಶೀಲ ಸಂಪಾದಕರಾಗಿ (Character Building) ಸಮಯಾ ಚಾರಿಗಳಾದಾಗ ನ್ಯಾಯವನ್ನು (Justice) ಸರ್ವರಿಗೂ ಸಮಾನವಾಗಿ ಸತ್ಯವಾಗಿ ದೊರಕಿಸಲು ಸಮರ್ಥರಾಗುತ್ತಾರೆ. ಈ ಸಮಾಪಕ (Finate) ಶಕ್ತಿಯನ್ನು ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ಆಯ್ಕೆಯಾ ಗುವ ಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕಾ ಗಿದೆ. ಡಾರ್ವಿನ್ರ ‘ಮಂಗನಿಂದ ಮಾನವ ವಿಕಾಸ ವಾದಂತೆ’ ಚುನಾವಣೆಯಿಂದ ಆಯ್ಕೆಯಾದ ಪ್ರತಿನಿಧಿಗಳು ವಿಕಾಸ ಹೊಂದಿ ಗ್ರಾಮಾಭಿವೃದ್ಧಿಗೆ ವಿಕಾಸದ ಪ್ರಥಮ ಸೋಪಾನವಾಗಬೇಕಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜ್ಯಶಾಸ್ತ್ರ ಪ್ರಾಜ್ಞರ ವಿಚಾರಗಳನ್ನು ಅವಶ್ಯಕವಾಗಿ ತಿಳಿಯಬೇಕಾಗಿರುತ್ತದೆ. ಖ್ಯಾತ ಬರಹಗಾರನಾದ ಲಾರ್ಡ್ ಬ್ರೈಸ್, ಪ್ರೊ. ಸೀಲೆ, ಅಬ್ರಾಹಂ ಲಿಂಕನ್, ಪ್ರೊ. ಜೆ.ಎನ್. ಮಿಲ್, ಮ್ಯಾಜಿನಿ, ಸರ್ ಸ್ಟ್ಯಾಫರ್ಡ್ ಕ್ರಿಪ್ಸ್, ಮಹಾತ್ಮಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಾಜಿ, ಆಚಾರ್ಯ ಕೃಪಲಾನಿ, ಬಿಪಿನ್ಚಂದ್ರ ಪಾಲ್, ಮಹದೇವ ರಾನಡೆ ಮುಂತಾದವರ ವಿಚಾರಧಾರೆ ‘ಅತೀ ಶ್ರೇಷ್ಠ, ಅನುಭವ ಹಾಗೂ ಬುದ್ದಿವಂತರ ಮುಂದಾಳತ್ವದಲ್ಲಿ ಎಲ್ಲರ ಪ್ರಗತಿಯು ಎಲ್ಲರ ಮುಖಾಂತರ ಆಗುವುದೇ ಪ್ರಜಾಪ್ರಭುತ್ವ’ ಎಂದು ಸಿದ್ಧಾಂತಿಕರಿಸಿರುವುದನ್ನು ಇಂದಿನ ಗ್ರಾಮ ಪಂಚಾಯಿತಿ ಚುನಾವಣಾ ಅಂಗಳಕ್ಕೆ ದುಮು ಕಿರುವ ಸ್ಪರ್ಧಾ ಪ್ರತಿನಿಧಿಗಳು ಅರಿತುಕೊಂ ಡಾಗ ಕಲ್ಯಾಣ ಗ್ರಾಮದ ಪರಿಕಲ್ಪನೆ ಸುಸಜ್ಜಿತವಾಗುವುದರಲ್ಲಿ ಸಂಶಯವಿಲ್ಲ.
‘ಹೊನ್ನಬಿತ್ತೇವು ಹೊಲಕ್ಕೆಲ್ಲಾ ; ಕಾಳ ಕೊಟ್ಟೇವು ಮನಿಗೆಲ್ಲ’ ಎಂಬ ಜನಪದನೊಂದಿಗೆ ಪಯಣಗೈದಾಗ ಭವ್ಯ ಭಾರತದ ದಿವ್ಯ ಗ್ರಾಮಗಳ ಬೆಳ್ಗಾಂತಿಯನ್ನು ಕಾಣಬಹುದು. ಆದ ಕಾರಣ ದೊಡ್ಡಂಪ (ದೊಡ್ಡವರ ರಂಪಾಟ), ಚಿಕ್ಕಂಪ (ಚಿಕ್ಕವರ ರಂಪಾಟ), ಗುಬ್ಬಲಾಟ (ಗುಬ್ಬಚ್ಚಿಯ ಗಲಾಟೆ)ಗಳು ನಿರ್ವೀರ್ಯವಾಗಿ ಸತ್ವಹೀನವಾಗುವುದರಲ್ಲಿ ಎರಡು ಮಾತಿಲ್ಲ.
ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು,
ದವನ ಕಾಲೇಜು, ದಾವಣಗೆರೆ.
ಮೊ: 8884527130