ಚಳಿಗಾಲದ ವಲಸೆಗಾರ ಸಾಮಾನ್ಯ ಮರಳು ಪೀಪಿ

ಮಧ್ಯ ಕರ್ನಾಟಕದ ಜಿಲ್ಲೆ ದಾವಣಗೆರೆ ಚಳಿಗಾಲದಲ್ಲೂ ಸ್ವಲ್ಪ ಬೆಚ್ಚಗಿನ ಪ್ರದೇಶ.  ಇಲ್ಲಿನ ಜನರಿಗೆ ಸ್ವಲ್ಪ ಚಳಿಯೆನಿಸಿದರೂ ಮೈಸೂರು, ಬೆಂಗಳೂರಿಗೆ ಹೋಲಿಸಿದರೆ ಅಂತಹ ಚಳಿಯೇನಿಲ್ಲ. ಸುತ್ತಲೂ ಕೃಷಿ ಭೂಮಿ. ಈಗಾಗಲೇ ಕೊಯ್ಲು ಮುಗಿಯುತ್ತಾ ಬಂದಿದ್ದು ಹೇರಳವಾಗಿ ಕಾಳು, ಹುಳು ಮುಂತಾದವುಗಳು ಲಭ್ಯ.  ಉತ್ತರ ಭಾರತ, ಚೀನಾ, ಮಂಗೋಲಿಯ ಮತ್ತು ಯೂರೋ ಪಿನ ದೇಶಗಳಲ್ಲಿ ಕೊರೆಯುವ ಚಳಿ.  ಹಲ ವಾರು ದೇಶಗಳಲ್ಲಿ ಕೆರೆಯ ನೀರು ಹಿಮಗಟ್ಟಿ ರುತ್ತದೆ.  ಇಂತಹ ಪರಿಸರದಲ್ಲಿ ಬದುಕಲು ಅಸಾಧ್ಯವಾದ ಪರಿಸ್ಥಿತಿಯೇರ್ಪಡುವ ಸೂಚನೆ ಸಿಕ್ಕ ಕೂಡಲೇ ಹಲವಾರು ಪ್ರಭೇದದ ಹಕ್ಕಿಗಳು ಉಷ್ಣ ಪ್ರದೇಶಗಳಿಗೆ ವಲಸೆ ಹೋಗುತ್ತವೆ.  ಅಂತಹ ಒಂದು ಹಕ್ಕಿಗಳ ಗುಂಪು ಎಂದರೆ ಮರಳು ಪೀಪಿ ಹಕ್ಕಿಗಳು (Sandpipers).  ಈ ಗುಂಪಿನ ಹಕ್ಕಿಗಳು ಸಾಮಾನ್ಯವಾಗಿ ಉದ್ದ ಕೊಕ್ಕು ಮತ್ತು ನೀಳ ಕಾಲುಗಳನ್ನು ಹೊಂದಿದ್ದು, ಕೆಸರಿನಲ್ಲಿ ಆಹಾರ ಹುಡುಕುತ್ತಿರುತ್ತವೆ.  ಇದರಲ್ಲಿ ಸಾಮಾನ್ಯ ಮರಳು ಪೀಪಿ ಅಥವಾ ಗದ್ದೆಗೊರವ ಹಕ್ಕಿಗಳು (Common Sandpiper) ಉತ್ತರಭಾರತದಿಂದ ದಾವಣಗೆರೆಗೆ ವಲಸೆ ಬಂದಿವೆ. ಪ್ರಾಣಿಶಾಸ್ತ್ರೀಯ ಹೆಸರು ಅಕ್ಟಿಟೈಟಿಸ್ ಹೈಪೊಲ್ಯೂಕಸ್ (Actitis hypoleucos).

ಪಾರಿವಾಳದ ಗಾತ್ರವಿರುವ ಇವುಗಳ ಗರಿಷ್ಠ ಎತ್ತರ 21 ಸೆಂ.ಮೀ. ದೇಹದ ಮೇಲ್ಭಾಗ ಬೂದು-ಮಿಶ್ರಿತ ಕಂದು ಬಣ್ಣ. ಬಿಳಿಯ ತಲೆ, ಹೊಟ್ಟೆ ಮತ್ತು ಹುಬ್ಬು  ಪೇಲವ, ಎದೆ ಮತ್ತು ಕುತ್ತಿಗೆಯ ಮೇಲ್ಭಾಗದಲ್ಲಿ ಕೆಲವು ಕಡು ಗೆರೆಗಳು.  ಉದ್ದ ಕೊಕ್ಕು ಮತ್ತು ನೀಳ ಕಾಲುಗಳು.  ದೂರದ ಹಾರಾಟಕ್ಕೆ ಅನುಕೂಲವಾಗುವ ರೆಕ್ಕೆಗಳು. ಹಾರುವಾಗ ಕಂದು ಬಣ್ಣದ ಪೃಷ್ಠ ಕಾಣುವುದು. ರೆಕ್ಕೆಗಳ ಅಂಚು ಬಿಳಿ ಬಣ್ಣದ್ದು.  ನೀರಿನ ಮೇಲೆ ಸರ್ರನೆ ಹಾರುತ್ತಾ ಆಗಾಗ್ಗೆ ರೆಕ್ಕೆಯನ್ನು ಬಡಿಯುತ್ತಿದ್ದು ವಿಮಾನದಂತೆ ಬಂದಿಳಿಯುತ್ತವೆ.  ಹಾರುವಾಗ ಟೀ…ಟೀ…ಟೀ… ಎಂದು ಸ್ವರ ಹೊರಡಿಸು ತ್ತವೆ.  ಕೆಸರಿನಲ್ಲಿ ಚುರುಕಾಗಿ ಓಡಾಡುವಾಗ ಆಗಾಗ್ಗೆ ಕುಂಡೆಯನ್ನು ಕುಣಿಸುತ್ತಿರುತ್ತವೆ.  ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಕಾಣದು.  ಒಂಟಿಯಾಗಿ ಮತ್ತೆ ಕೆಲವೊಮ್ಮೆ ಜೊತೆಯಾಗಿ ಕೆರೆ, ತೊರೆ, ನದಿ, ಸಮುದ್ರದ ಅಂಚಿನ ಕೆಸರಿನಲ್ಲಿ ಆಹಾರ ಹುಡುಕುತ್ತಿರುತ್ತವೆ.  ಕೀಟಗಳು, ಕೆಸರಿನ ಹುಳುಗಳು, ಮೃದ್ವಂಗಿಗಳು ಪ್ರಮುಖ ಆಹಾರ. ಮೇ ನಿಂದ ಜೂನ್‍ವರೆಗೆ ಉತ್ತರ ಭಾರತದ ಕಾಶ್ಮೀರ, ಗರ್‍ವಾಲ್, ಕೌಮಾನ್‍ಗಳಲ್ಲಿ ಸಂತಾನಾಭಿವೃದ್ಧಿ. ಹಳದಿ ಬಣ್ಣದ ಮೊಟ್ಟೆಗಳಲ್ಲಿ ಚುಕ್ಕೆಗಳಿರುತ್ತವೆ.  ಒಂದು ಬಾರಿಗೆ ನಾಲ್ಕು ಮೊಟ್ಟೆಗಳನ್ನಿಡುತ್ತವೆ.

ಕರ್ನಾಟಕದಲ್ಲಿ ಚಳಿಗಾಲ ಪ್ರಾರಂಭವಾಗುವ ಮೊದಲೇ ಅಂದರೆ, ಅಗಸ್ಟ್ ತಿಂಗಳಿನಲ್ಲಿ ಬಂದು ಕಡೆಯದಾಗಿ ಮೇ ತಿಂಗಳಲ್ಲಿ ವಾಪಸ್ಸು ಹೋಗುವ ವಲಸೆಗಾರ ಹಕ್ಕಿಗಳು. ಪಾಕಿಸ್ತಾನ್, ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ್ ದೇಶಗಳಲ್ಲೂ ಕಾಣಸಿಗುತ್ತವೆ.  ದಾವಣಗೆರೆಯ ಕುಂದುವಾಡ ಕೆರೆ, ದೇವರ ಬೆಳೆಕೆರೆ, ಕೊಂಡಜ್ಜಿ ಕೆರೆ, ಆವರಗೆರೆ, ಬೆಳವನೂರು ಕೆರೆ ಮುಂತಾದ ಕಡೆ ಕೆಸರಿನಲ್ಲಿ ಆಚೀಚೆ ಚುರುಕಾಗಿ ಒಡಾಡುವ ಈ ಹಕ್ಕಿಗಳನ್ನು ಕಾಣಬಹುದು.  ಕೆಸರಿನ ಗದ್ದೆಗಳಲ್ಲೂ ಮಣ್ಣಿನಲ್ಲಿರುವ ಕೀಟಗಳನ್ನು ತಿನ್ನುತ್ತಿರುವುದನ್ನು ನೋಡಬಹುದು. ದಾವಣಗೆರೆಯ ವಾತಾವರಣ ಇಂತಹ ವಲಸೆ ಹಕ್ಕಿಗಳಿಗೆ ಇಷ್ಟವಾಗಿರುವುದು ಸಂತೋಷದ ಸಂಗತಿ.  ದಾವಣಗೆರೆಯ ಪಕ್ಷಿ ವೈವಿಧ್ಯತೆಗೆ ಇವುಗಳನ್ನು ಸೇರ್ಪಡೆ ಮಾಡಬೇಕಿದೆ. ಇಲ್ಲಿನ ಜನರು ಪ್ರಕೃತಿಯ ಬಗ್ಗೆ ಗಮನ ಹರಿಸಿ ಪರಿಸರ ಹಾಳಾಗದಂತೆ ನೋಡಿಕೊಂಡರೆ, ಖ್ಯಾತ ಪಕ್ಷಿಧಾಮಗಳಲ್ಲೂ ಸಿಗದ ಹಕ್ಕಿಗಳನ್ನು ಇಲ್ಲಿಯೇ ನೋಡಬಹುದು. ಮಕ್ಕಳಿಗೆ ಪರಿಸರವನ್ನು ಅರಿಯಲು ಸಹಾಯಕ. ಸೋಜಿಗವೀ ಜಗವು.


– ಡಾ. ಎಸ್. ಶಿಶುಪಾಲ, 
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ.
[email protected]

error: Content is protected !!