ಐವರು ಮಹಿಳಾ ದರೋಡೆಕೋರರಿಗೆ ಶಿಕ್ಷೆ

ಭಿಕ್ಷೆ ಕೇಳುವ ನೆಪದಲ್ಲಿ ಹಣ ಸುಲಿಗೆ

ದಾವಣಗೆರೆ, ಡಿ.19- ಭಿಕ್ಷೆ ಕೇಳುವ ನೆಪದಲ್ಲಿ ಇಬ್ಬರು ಮಹಿಳೆಯರಿಗೆ ಚಾಕು ತೋರಿಸಿ, ಹೆದರಿಸಿ ಹಣ ಸುಲಿಗೆ ಮಾಡಿದ್ದ ಐವರು ಮಹಿಳಾ ದರೋಡೆಕೋರರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 10 ವರ್ಷಗಳ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕವಿತಾ, ವೆಂಕಟಮ್ಮ , ಕಲಾವತಿ, ಜ್ಯೋತಿ, ಅಲುವೇಲು ಶಿಕ್ಷೆಗೊಳಗಾದ ಆರೋಪಿತರು. 

ಜು.18, 2017ರಂದು ಸುವರ್ಣಮ್ಮ ಎಂಬಾಕೆ ಸ್ವಂತ ಕೆಲಸದ ನಿಮಿತ್ತ ನಗರದಿಂದ ರಾಣೇಬೆನ್ನೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ 7 ಗಂಟೆಗೆ ಹರಿಹರಕ್ಕೆ ಬಂದು ಹೋಟೆಲ್‌ ವೊಂದರಲ್ಲಿ ತಿಂಡಿ ತಿಂದು ದಾವಣಗೆರೆಗೆ ಬರಲು ರಾತ್ರಿ 8 ಗಂಟೆಗೆ ಹರಿಹರದ ಗುರುಭವನದ ಗೋಡೆ ಪಕ್ಕ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಆಗ ಆರೋಪಿತರು ದರೋಡೆ ಮಾಡುವ ಸಮಾನ ಉದ್ದೇಶದಿಂದ ಭಿಕ್ಷೆ ಬೇಡುವ ನೆಪದಲ್ಲಿ ಸುವರ್ಣಮ್ಮ ಮತ್ತು ಮೀನಾಕ್ಷಮ್ಮ ಬಳಿ ಹೋಗಿದ್ದು, ಅದರಲ್ಲಿ ಆರೋಪಿ ಕವಿತಾ ಎಂಬಾಕೆ ತಾನು ಗರ್ಭಿಣಿ ಎಂದು ಹೇಳಿ, ಹೊಟ್ಟೆ ಹಸಿವೆಂದಾಗ ಸುವರ್ಣಮ್ಮ ವ್ಯಾನಿಟಿ ಬ್ಯಾಗಿನಿಂದ ಪರ್ಸ್ ತೆಗೆದು ಹಣ ನೀಡಲು ಮುಂದಾದಾಗ ಉಳಿದ ಆರೋಪಿತರಾದ ವೆಂಕಟಮ್ಮ , ಕಲಾವತಿ, ಜ್ಯೋತಿ, ಅಲುವೇಲು ಇವರೆಲ್ಲಾ ಸುತ್ತುವರೆದು ವ್ಯಾನಿಟಿ ಬ್ಯಾಗ್ ಹಿಡಿದು ಎಳೆದಾಡಿದ್ದಾರೆ.

ಆರೋಪಿಗಳ ಪೈಕಿ ಜ್ಯೋತಿ ಎಂಬಾಕೆ ಸುವರ್ಣಮ್ಮ ಅವರ 4,700 ರೂ. ಹಣವುಳ್ಳ ಪರ್ಸ್ ಕಿತ್ತುಕೊಂಡಿದ್ದು, ಆಗ ಸುವರ್ಣಮ್ಮ ಮತ್ತು ಮೀನಾಕ್ಷಮ್ಮ ಗಾಬರಿಯಿಂದ ಕಿರುಚಿದಾಗ ಆರೋಪಿ ಕಲಾವತಿಯು ಸುವರ್ಣಮ್ಮ ಅವರ ಕೆನ್ನೆಗೆ ಹೊಡೆದು ತನ್ನಲ್ಲಿದ್ದ ಚಾಕು ತೋರಿಸಿ ಹೆದರಿಸಿ ಓಡಿ ಹೋಗಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ನಡೆಸಿದ್ದ ಹರಿಹರ ಸಿಪಿಐ ಲಕ್ಷ್ಮಣನಾಯ್ಕ ಹಾಗೂ ರಮೇಶ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು ಎಲ್ಲಾ ಆರೋಪಿತರಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡ ಕೊಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ. ದಂಡವನ್ನು ಪಾವತಿಸಿದಲ್ಲಿ ಪರಿಹಾರವಾಗಿ ದಂಡದ ಹಣದಲ್ಲಿ 10 ಸಾವಿರವನ್ನು ಸುವರ್ಣಮ್ಮ ಅವರಿಗೆ ಕೊಡಬೇಕೆಂದು ತೀರ್ಪು ನೀಡಿದ್ದಾರೆ. 

ನ್ಯಾಯಾಂಗ ಬಂಧನದಲ್ಲಿರುವ ಅವಧಿ ಯನ್ನು ಸೆಟ್ ಆಫ್ ಮಾಡಲು ಆದೇಶವಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ವಾದ ಮಂಡಿಸಿದ್ದರು.

error: Content is protected !!