ಆರ್ಟ್ ಗ್ಯಾಲರಿಯಲ್ಲಿ ಅರಳಿದ ಕಲಾಕೃತಿಗಳು

ದಾವಣಗೆರೆ, ಡಿ. 19-  ನಗರದ ಕಲಾವಿದೆ ಶ್ರೀಮತಿ ಕೆ.ದಾಕ್ಷಾಯಿಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು  ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿನ ಕಲಾ ಗ್ಯಾಲರಿಯಲ್ಲಿ ನಿನ್ನೆ ನಡೆಯಿತು.

ಎರಡು ದಿನಗಳ ಕಾಲ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ 30ಕ್ಕೂ ಹೆಚ್ಚು ಕಲಾಕೃತಿಗಳಿದ್ದವು.  ಗ್ರಾಮೀಣ ಸೊಗಡಿನ ಚಿತ್ರಣ, ಸೂರ್ಯೋದಯ, ನಿಸರ್ಗದ ಹಲವು ಮಜಲುಗಳು,  ಹೂವಿನ ಮೇಲಿನ ದುಂಬಿ, ಬಾಲ್ಯದ ಆಟ,  ಪೋಷಕರ ಜಗಳದಿಂದ ಮಗುವಿನ ಮೇಲಾಗುವ ಪರಿಣಾಮ, ಮಹಿಳಾ ಸಂವೇದನೆಯ ನಾನಾ ಮುಖಗಳು ಹೀಗೆ ಹಲವಾರು ಚಿತ್ರಗಳು ಗಮನ ಸೆಳೆದವು.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಬಿಜಾಪುರ ಹವ್ಯಾಸಿ ಕಲಾವಿದೆ ಶ್ರೀಮತಿ ಚೇತನಾ ರವಿ, ಕಳೆದ ಒಂದು ವರ್ಷದಿಂದ ಕೊರೊನಾದಿಂದಾಗಿ ಕಲಾ ಪ್ರದರ್ಶನಗಳು ಆನ್‌ಲೈನ್‌ಗೆ ಸೀಮಿತವಾಗಿದ್ದವು. ಆದರೆ ಈಗ ಮತ್ತೆ ನೇರವಾಗಿ ನೋಡಲು ಸಾಧ್ಯವಾಗುತ್ತಿರುವುದು ಸಂತಸದ ವಿಷಯ ಎಂದರು.

ಚಿತ್ರ ಕಲಾವಿದರು ತಮ್ಮದೇ ಆದ ಕೌಶಲ್ಯವನ್ನು ರೂಢಿಸಿಕೊಂಡು ಚಿತ್ರಗಳನ್ನು ರಚಿಸುವಲ್ಲಿ ನಿರತರಾ ದರೆ ಯಶಸ್ಸು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವನಿತಾ ಸಮಾಜದ ಮಾಜಿ ಅಧ್ಯಕ್ಷೆ ಶ್ರೀಮತಿ ಲತಿಕಾ ದಿನೇಶ್ ಶೆಟ್ಟಿ, ಕಲೆ ಎನ್ನುವುದು ಮರೆಯುವಂತ ಹದ್ದಲ್ಲ. ಯಾವುದೇ ವಾಹನದ ಡ್ರೈವಿಂಗ್ ಕಲಿತರೆ ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೆ, ಕಲೆಯೂ ಮನದಲ್ಲಿ ಉಳಿದಿರುತ್ತದೆ. ಕಲಾವಿದರು ತಮ್ಮಲ್ಲಿರುವ ಪ್ರತಿಭೆ ಹೊರ ಹಾಕಲು ಇಂತಹ ವೇದಿಕೆಗಳು ಸಹಕಾರಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಫೈನ್ ಆರ್ಟ್‌ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಎಸ್.ಕಮ್ಮಾರ್, ಕಲಾವಿದರು ಚಿತ್ರಗಳನ್ನು ಬಿಡಿಸುವಾಗ `ಆರ್ಟ್ ಮಾರ್ಕೆಟ್’ ಬಗ್ಗೆಯೂ ತಿಳಿದಿರಬೇಕು ಎಂದು ಕಿವಿ ಮಾತು ಹೇಳಿದರು.

ಕಲಾವಿದರಾದ ಶ್ರೀಮತಿ ಕೆ.ದಾಕ್ಷಾಯಿಣಿ ಮಾತನಾಡಿ, 2001 ರಿಂದ ಚಿತ್ರಕಲೆಗಳನ್ನು ರಚಿಸುವಲ್ಲಿ ಆರಂಭಿಸಿದ್ದು, ಸಂಸಾರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಪ್ರದರ್ಶನ ಮಾಡಬೇಕೆ ನ್ನುವ ಆಸೆ ಈಡೇರಿರಲಿಲ್ಲ. ಆದರೆ ಕೊರೊನಾ ವೇಳೆ ಸಿಕ್ಕ ಸಮಯವು ಪ್ರದರ್ಶನಕ್ಕೆ ಮುನ್ನುಡಿಯಾಯಿತು. ಬಹು ದಿನಗಳ ಕನಸು ನನಸಾಗಿದೆ ಎಂದರು.

ಶ್ರೀಮತಿ ಅನಸೂಯ ಪ್ರಾರ್ಥಿಸಿದರು. ಶರಣಪ್ಪ ಸ್ವಾಗತಿಸಿದರು. ದತ್ತಾತ್ರೆಯ ಭಟ್ ನಿರೂಪಿ ಸಿದರು. ಶ್ರೀಮತಿ ಹೇಮಲತಾ ವಂದಿಸಿದರು.

error: Content is protected !!