ಹರಪನಹಳ್ಳಿಯಲ್ಲಿ ಗೊಂದಲದ ಗೂಡಾದ ಕಾಂಗ್ರೆಸ್ ಸಭೆ
ಹರಪನಹಳ್ಳಿ, ಡಿ.20- ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಯಾರ ನಾಯಕತ್ವದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ ಎಂದು ತಾಲ್ಲೂಕಿನ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಗೊಂದಲದ ವಾತವರಣ ಸೃಷ್ಠಿಯಾಗಿದ್ದು, ಗ್ರಾಮ ಪಂಚಾಯ್ತಿ ಚುನಾವಣೆಯ ಸಿದ್ಧತೆಗಾಗಿ ಪಟ್ಟಣದ ಆರ್.ಎಸ್.ಎನ್ ಶಾಲಾ ಆವರಣದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ವೀಕ್ಷಕ ಅಲ್ಲಂ ವೀರಭದ್ರಪ್ಪನವರ ಎದುರಿಗೆ ಗೊಂದಲ ಉಂಟಾಗಿ, ಭಿನ್ನಮತ ಸ್ಫೋಟ ಗೊಂಡಿತು.
ಕಳೆದ ವಿಧಾನಸಭಾ ಚುನಾವಣೆ ಯಿಂದ ಇತ್ತೀಚಿನವರೆಗೂ ಮೂರು ಬಣಗಳಾಗಿ ಮಾರ್ಪಟ್ಟ ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆ ಇಲ್ಲಿಯವರಿಗೂ ಬಗೆಹರಿ ಯದೇ ಕೆಲ ಮುಖಂಡರು ತಮ್ಮ ತಮ್ಮ ಪ್ರತಿಷ್ಠಿತೆಯ ಬಣಗಳಾಗಿ ಮಾಡಿಕೊಂ ಡಿದ್ದು, ತಾಲ್ಲೂಕಿನ ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷದ ನಿಷ್ಠವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಕೆಲ ಕಾಂಗ್ರೆಸ್ ಪಕ್ಷದ ಮುಖಂಡರು ಉಸ್ತುವಾರಿ ಮುಖಂಡರಿಗೆ ತಮ್ಮ ಅಳಲನ್ನು ತೋಡಿಕೊಂಡರು.
ನಂತರ ಕಾಂಗ್ರೆಸ್ ಪಕ್ಷದ ತಾಲ್ಲೂಕು ಗ್ರಾಮ ಪಂಚಾಯತಿ ಉಸ್ತುವಾರಿ ಮಧ್ಯಸ್ಥಿಕೆ ವಹಿಸಿಕೊಂಡು ತಾಲ್ಲೂಕಿನಲ್ಲಿ ಇದೇ ರೀತಿ ಗೊಂದಲ ಸೃಷ್ಠಿಯಾದರೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುವುದರಲ್ಲಿ ಯಾವುದೇ ರೀತಿ ಅನುಮಾನವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆ ಪೂರ್ಣಗೊಂಡು ವಂದನಾರ್ಪಣೆ ಹೇಳುವಾಗ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಅವರು ವೇದಿಕೆಯ ಮುಂಭಾಗಕ್ಕೆ ಆಗಮಿಸಿ, ಅಲ್ಲಂ ವೀರಭದ್ರಪ್ಪನವರ ಬಳಿ ಈ ಸಭೆಗೆ ನಮಗೆ ಆಹ್ವಾನವಿಲ್ಲ. ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಆಗ ಅಲ್ಲಂ ವೀರಭದ್ರಪ್ಪನವರು, ತಮ್ಮದು ಏನಾದರೂ ಇದ್ದರೆ ಲಿಖಿತವಾಗಿ ಕೊಡಿ ಎಂದು ಹೇಳಿದರು. ಆಗ ಹಲವಾಗಲು ಗ್ರಾಮದ ಮುಖಂಡ ಕಿತ್ತೂರು ಕೊಟ್ರಪ್ಪ ಮದ್ಯ ಪ್ರವೇಶಿಸಿ, ನಮ್ಮ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ದಿಕ್ಕೇ ಇಲ್ಲದ ಪಕ್ಷವಾಗಿದೆ. ಈ ಸಭೆಗೆ ನಮಗೂ ಆಹ್ವಾನ ಇಲ್ಲ.ನಾವು ಯಾರ ಹತ್ತಿರ ಹೋಗಬೇಕು ಎಂದು ಅವರು ಪ್ರಶ್ನಿಸಿದರು.
ಹೀಗಾದರೆ ಪಕ್ಷ ಕಟ್ಟುವುದು ಹೇಗೆ, ಪಕ್ಷ ಉಳಿಯುತ್ತದೆಯೇ?, ಇಡೀ ತಾಲ್ಲೂಕು ಪ್ರವಾಸ ಮಾಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.
ಕಲ್ಲಹಳ್ಳಿ ಗೋಣೆಪ್ಪನವರು ಸಭೆಗೆ ಕಾರ್ಯಕರ್ತರಿಗೆ ಕರೆದಿಲ್ಲ, ಒಂದು ಫೋನ್ ಇಲ್ಲ, ಹೆಸರಿಗೆ ಜಿಲ್ಲಾದ್ಯಕ್ಷರು ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪನವರು, ಕಾರ್ಯಕರ್ತರು ನಿಷ್ಟಾವಂತರಾಗಿದ್ದೇವೆ, ಮುಖಂಡರಲ್ಲಿ ಗುಂಪುಗಾರಿಕೆ ಇದೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವಾಗಬೇಕು ಎಂದರು. ಮತ್ತೂರು ಬಸವರಾಜ ಸಹ ದ್ವನಿಗೂಡಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್ ಮಾತನಾಡಿ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಏಕೆ ಕರೆದಿಲ್ಲ, ಇನ್ನೂ ಅನೇಕ ಮುಖಂಡರು ಬಂದಿಲ್ಲ, ಗುಂಪುಗಾರಿಕೆ ಮಾಡಿಕೊಂಡು ಬೇರೆಯವರ ಮೇಲೆ ಹಾಕುತ್ತಾರೆ, ಎಲ್ಲರನ್ನು ಕರೆಸಿ ಎಂದು ತಾಕೀತು ಮಾಡಿದರು.
ಮುಖಂಡ ಪಿ.ಎಲ್. ಪೋಮ್ಯನಾಯ್ಕ ಅವರು ಪಕ್ಷದ ವೇದಿಕೆಯಲ್ಲಿಯೇ ಎಲ್ಲರೂ ಕೆಲಸ ಮಾಡಬೇಕು ಎಂದರು.
ಆಗ ವೀಕ್ಷಕ ಅಲ್ಲಂ ವೀರಭದ್ರಪ್ಪ ನವರು, ಎಲ್ಲರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಲೆಂದು ಇಲ್ಲಿ ಬೈದು ಇಲ್ಲಿ ಸಭೆ ಇಡಿಸಿದ್ದೇನೆ ಎಂದು ಹೇಳಿದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರಿಗೆ ಬಹಳ ಸಲ ಫೋನ್ ಮಾಡಿದ್ದೇನೆ ಎಂದು ಉತ್ತರಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಒಂದು ಕಮಿಟಿ ರಚಿಸಿ ತಾಲ್ಲೂಕಿನಲ್ಲಿ ಪ್ರವಾಸ ಮಾಡಿ, ಜಿಲ್ಲಾದ್ಯಕ್ಷರು ಮೇಲುಸ್ತುವಾರಿ ನಡೆಸಿ ನನಗೆ ವರದಿ ಕೊಡಿ ಎಂದು ಸೂಚಿಸಿದರು.
ಸಭೆಗೆ ಕೆಲವರನ್ನು ಆಹ್ವಾನ ನೀಡದಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ, ಆದರೂ ಬಂದಿದ್ದಕ್ಕೆ ಸಂತೋಷ ಎಂದು ಹೇಳಿದರು.
ಒಟ್ಟಿನಲ್ಲಿ ಅನೇಕರು ಸಭೆಗೆ ಆಹ್ವಾನ ನೀಡಿಲ್ಲ ಎಂಬುದು ಸೇರಿದಂತೆ ವಿವಿಧ ದೂರನ್ನು ಹೇಳಿದರು. ಸಭೆಯಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇದ್ದುದೇ ಇಲ್ಲಿನ ಕಾಂಗ್ರೆಸ್ ಪರಿಸ್ಥಿತಿಯನ್ನು ಸಾರುತ್ತಿತ್ತು.