ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್
ಮಲೇಬೆನ್ನೂರು, ಡಿ.20- ಮುಂದಿನ ವಾರ್ಷಿಕ ಮಹಾಸಭೆಯ ವೇಳೆಗೆ ಹೊಳೆಸಿರಿಗೆರೆ ಯಲ್ಲಿ ಶಿವ ವಿವಿಧೋದ್ದೇಶ ಸಹಕಾರ ಸಂಘದ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್ ಹೇಳಿದರು.
ಭಾನುವಾರ ಪಟ್ಟಣದ ನಂದಿಗುಡಿ ರಸ್ತೆಯಲ್ಲಿರುವ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಶಿವ ವಿವಿಧೋದ್ದೇಶ ಸಹಕಾರ ಸಂಘದ 14ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಳೆಸಿರಿಗೆರೆಯಲ್ಲಿ ಸಂಘದ ಶಾಖೆಗೆ ನಿವೇಶನ ಖರೀದಿಸಲು ಸದಸ್ಯರು ಈ ವರ್ಷದ ತಮ್ಮ ಡಿವಿಡೆಂಡ್ ಬಿಟ್ಟುಕೊಡುವಂತೆ ಡಾ. ಬಿ. ಚಂದ್ರಶೇಖರ್ ಅವರು ಕೇಳಿದಾಗ ಸದಸ್ಯರು ಸಮ್ಮತಿ ನೀಡಿದರು.
ಸಂಘವು ಸ್ಥಾಪನೆಯಾಗಿ 13 ವರ್ಷಗಳಲ್ಲಿ ನಿಮ್ಮೆಲ್ಲರ ಸಹಕಾರ ಸಾಕಷ್ಟು ಪ್ರಗತಿ ಸಾಧಿಸಿದೆ. ಸಂಘದ ಸಂಸ್ಥಾಪಕರಾದ ದಿ. ಹೆಚ್.ಜಿ. ಗುರುಸಿದ್ದಪ್ಪನವರು ಉಚಿತವಾಗಿ ನೀಡಿದ ನಿವೇಶನದಲ್ಲಿ ದಾನಿಗಳ ಹಾಗೂ ಸಂಘದ ಕಟ್ಟಡ ನಿಧಿಯಿಂದ ಸುಸಜ್ಜಿತ ಕಟ್ಟಡ ಕಟ್ಟಿದ್ದೇವೆ.
ಕುಂಬಳೂರು ಸಮೀಪ ಸಂಘದ ಹೆಸರಿನಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಜಮೀನು ಖರೀದಿಸಿದ್ದೇವೆ. ಸಾಲಗಾರರಿಗೆ ಶೇ. 1 ಬಡ್ಡಿ ಕಡಿಮೆ ಮಾಡಿದ್ದೇವೆ. ಇ-ಸ್ಟಾಂಪಿಂಗ್ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಡಾ. ಬಿ. ಚಂದ್ರಶೇಖರ್ ಹೇಳಿದರು.
ದಿನಾಂಕ 30.3.2020 ಕ್ಕೆ ಸಂಘವು 2,947 ಸದಸ್ಯರನ್ನು ಹೊಂದಿದ್ದು, 5,38,30,570 ಕೋಟಿ ರೂ. ಸಾಲ ನೀಡಿದೆ. 5,43,31,512 ಕೋಟಿ ರೂ. ಠೇವಣಿ ಹೊಂದಿದ್ದು, 14,17,728 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದರು.
ಹಿರಿಯ ನಿರ್ದೇಶಕ ಬಣಕಾರ ವಿರೂಪಾಕ್ಷಪ್ಪ ಅವರು, 2020-21ನೇ ಸಾಲಿನ ಸಂಘದ ಕಾರ್ಯ ಚಟುವಟಿಕೆಗಳ ರೂಪುರೇಷೆಗಳನ್ನು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ಕುಂಬಳೂರಿನ ಕೆ. ತೀರ್ಥಪ್ಪ, ಎ. ಹನುಮೇಶ್, ನಿಟ್ಟೂರಿನ ಎನ್.ಜಿ. ಶಿವಾಜಿ ಪಾಟೀಲ್, ಇ.ಎಂ. ಮರುಳಸಿದ್ದೇಶ್, ಪ್ರಭುಸ್ವಾಮಿ ಮಾತನಾಡಿದರು.
ಸಂಘದ ಪ್ರಭಾರ ಕಾರ್ಯದರ್ಶಿ ಜಿ.ಎಂ. ನಳಿನ ಸಭೆ ವಿಷಯಸೂಚಿ ಓದಿದರೆ, ಶಾಖೆಯ ಕಾರ್ಯದರ್ಶಿ ಎಸ್.ಎಂ. ಉಮೇಶ್ ಅವರು ವಾರ್ಷಿಕ ಲೆಕ್ಕಪತ್ರ ಓದಿ ಅನುಮೋದಿಸಿದರು.
ಕೆ.ಜಿ. ಅಕ್ಷತ ಅವರು ಲೆಕ್ಕಪರಿಶೋಧನಾ ವರದಿಯನ್ನು ಮತ್ತು ಹೆಚ್. ಹನುಮಂತಪ್ಪ ಅವರು ಹಿಂದಿನ ಸಾಲಿನ ಅಂದಾಜು ಪತ್ರಿಕೆಗಿಂತ ಹೆಚ್ಚುವರಿ ಆದ ಖರ್ಚುಗಳ ಕುರಿತಂತೆ ಮಾಹಿತಿ ನೀಡಿದರು.
ಬಿ.ಹೆಚ್. ವಿಜಯ್ ಅವರು, ಆಡಳಿತ ಮಂಡಳಿ ತಯಾರಿಸಿದ ಅಂದಾಜು ಪತ್ರಿಕೆ ಮಂಡಿಸಿದರೆ, ಸಂಘದ ನಿರ್ದೇಶಕ ಕೆ.ಎಸ್. ರಂಗನಾಥ್ ಅವರು 2019-20ನೇ ಸಾಲಿನ ನಿವ್ವಳ ಲಾಭ ವಿಂಗಡಣೆಗೆ ಸಭೆಯ ಅನುಮತಿ ಕೇಳಿ ಒಪ್ಪಿಗೆ ಪಡೆದುಕೊಂಡರು.
ಸಂಘದ ನಿರ್ದೇಶಕ ಬೆಳ್ಳೂಡಿಯ ಎಸ್.ಎಂ. ರವಿಶಂಕರ್ ಅವರು, ಲೆಕ್ಕಪರಿಶೋಧಕರ ನೇಮಕ ವನ್ನು ಸಭೆಗೆ ತಿಳಿಸಿ, ಅನುಮತಿ ಪಡೆದರು.
ಈ ಸಂದರ್ಭದಲ್ಲಿ 2019-20ನೇ ಸಾಲಿನಲ್ಲಿ ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮತ್ತು ಸಾಲದ ಹಣ ವಸೂಲಿ ಮಾಡಿ ಅತಿ ಹೆಚ್ಚು ಕಮೀಷನ್ ಪಡೆದುಕೊಂಡ ಬೆಳ್ಳೂಡಿಯ ಎನ್.ಎಸ್. ವಿಜಯಕುಮಾರ್ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಸಂಘದ ಉಪಾಧ್ಯಕ್ಷ ಯಲವಟ್ಟಿಯ ಜಿ. ಆಂಜನೇಯ, ನಿರ್ದೇಶಕರಾದ ಕೊಕ್ಕನೂರಿನ ಜಿ. ದ್ಯಾಮಣ್ಣ, ನಿಟ್ಟೂರಿನ ಶ್ರೀಮತಿ ನಾಗರತ್ನ ಧನಂಜಯ, ಹರಳಹಳ್ಳಿಯ ಸುರೇಶಚಾರ್ ವೇದಿಕೆಯಲ್ಲಿದ್ದರು.
ಸಿರಿಗೆರೆ ಗದಿಗೆಪ್ಪ, ಹಳೆಮನಿ ಶಂಭುಲಿಂ ಗಪ್ಪ, ಕೆ. ಮಂಜಪ್ಪ, ಚಿಟ್ಟಕ್ಕಿ ನಾಗರಾಜ್, ಹೊಸೂರು ರಂಗಪ್ಪ ಮತ್ತಿತರರು ಸಭೆಯಲ್ಲಿದ್ದರು.
ಜೆ. ಮೇಘನಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕರೂ ಆಗಿರುವ ವಕೀಲ ಹೆಚ್.ಬಿ. ಶಿವಕುಮಾರ್ ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕರೂ ಆಗಿರುವ `ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.