ನಾಲ್ವರು ಮನೆಗಳ್ಳರ ಬಂಧನ ಚಿನ್ನಾಭರಣ, ಕಾರು ವಶ

ದಾವಣಗೆರೆ, ಡಿ.18- ಇಬ್ಬರು ಆಟೋ ಚಾಲಕರು ಸೇರಿದಂತೆ ನಾಲ್ವರು ಮನೆಗಳ್ಳರನ್ನು ಬಂಧಿಸಿರುವ ಇಲ್ಲಿನ ಕೆಟಿಜೆ ನಗರ ಪೊಲೀಸರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ನಿಟುವಳ್ಳಿ ವಾಸಿ ಎನ್ನಲಾದ ಆಟೋ ಚಾಲಕರುಗಳಾದ ರಮೇಶ್ ಅಲಿಯಾಸ್ ಪಾಪು ರಮೇಶ, ಎಸ್‍ಪಿಎಸ್ ನಗರದ ವಾಸಿ ಎನ್ನಲಾದ ಹೆಚ್. ಹನುಮಂತ ಅಲಿಯಾಸ್ ಕರಿ ಹನುಮಂತ, ಬೇತೂರು ರಸ್ತೆಯ ದೇವರಾಜ ಅರಸು ಕ್ವಾಟ್ರಸ್ ವಾಸಿ ಎನ್ನಲಾದ ತರಕಾರಿ ವ್ಯಾಪಾರಿ ನವೀದ್ ಅಲಿಯಾಸ್ ಕೆಪ್ಪ, ಎಸ್.ಎಸ್. ಲೇಔಟ್ 4ನೇ ಮೇನ್, 2ನೇ ಕ್ರಾಸ್ ವಾಸಿ ಎನ್ನಲಾದ ರಿಯಲ್ ಎಸ್ಟೇಟ್ ವ್ಯವಹಾರಸ್ಥ ಹುತ್ತೇಶ್ ಅಲಿಯಾಸ್ ಹುತ್ತಿ ಬಂಧಿತ ಕಳ್ಳರು.

ಮುಂಜುಳ ಎಂಬುವರ ಮನೆಯಲ್ಲಿ ಮನೆಯ ಹಿಂಬಾಗಿಲ ಬೀಗವನ್ನು ಆಯುಧದಿಂದ
ಮುರಿದು ಒಳಗೆ ಪ್ರವೇಶಿಸಿದ ಬಂಧಿತ ಕಳ್ಳರು, ಬೆಳ್ಳಿ ಮತ್ತು ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಿದ್ದರು. 

ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ತನಿಖಾಧಿಕಾರಿ ದಕ್ಷಿಣ ವೃತ್ತದ ಸಿಪಿಐ ಹೆಚ್. ಗುರು ಬಸವರಾಜ್, ಕೆಟಿಜೆ ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್ ಐ ಅಬ್ದುಲ್ ಖಾದರ್ ಜಿಲಾನಿ, ಎಎಸ್ ಐ ಕೆ.ಎಲ್. ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿಗಳಾದ ಲೋಕಾನಾಯ್ಕ, ರಾಜು, ಚಂದ್ರಪ್ಪ, ಮಂಜುನಾಥ, ಗಿರೀಶ ಗೌಡ ಒಳಗೊಂಡ ತಂಡವು ಆರೋಪಿಗಳನ್ನು ದಸ್ತಗಿರಿ ಮಾಡಿದೆ.

ಕೃತ್ಯದ ನಂತರ ಬಂಧಿತರು ಅಡವಿಟ್ಟಿದ್ದ 5 ಲಕ್ಷ ರೂ. ಮೌಲ್ಯದ  ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಪತ್ತೆ ಹಚ್ಚಿದ ಪೊಲೀಸರಿಗೆ ಎಸ್ಪಿ ಹನುಮಂತರಾಯ ನಗದು ಬಹುಮಾನ ಘೋಷಿಸಿದ್ದಾರೆ.

error: Content is protected !!