ರಾಣೇಬೆನ್ನೂರು, ಡಿ.18- ಹೆಂಡತಿಗೆ ಕಿರುಕುಳ ನೀಡಿ ಆತ್ಮಹತ್ಯೆ ಪ್ರಚೋದಿಸಿದ ಗಂಡನಿಗೆ 7 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ 8000 ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕೆ.ಎಸ್.ಜೋತಿಶ್ರೀ ತೀರ್ಪು ನೀಡಿದ್ದಾರೆ.
ವಿವರ: ತಾಲ್ಲೂಕಿನ ಕರೂರು ಗ್ರಾಮದ ಆರೋಪಿತ ಅಶೋಕನಿಗೆ ಇದೇ ತಾಲ್ಲೂಕಿನ ನಲವಾಗಲು ಗ್ರಾಮದ ಸುರೇಶ ಕರೂರು ಇವರ ಮಗಳು ಜ್ಯೋತಿಯನ್ನು 2015ರಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಅಶೋಕನು ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ ಆ ಹಿಂಸೆ ತಾಳಲಾರದೆ ದಿನಾಂಕ 5-9-2016 ರಂದು ಜ್ಯೋತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಜ್ಯೋತಿಯ ತಾಯಿ ಶಶಿಕಲಾ ನೀಡಿದ ದೂರಿನನ್ವಯ ಕುಮಾರಪಟ್ಟಣಂ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಅಭಿಯೋಜಕರಾದ ಎಸ್.ಎ.ಶಿರೂರ ಹಾಗೂ ಮುರುಗೇಶ ಅಂಕದ ಸರ್ಕಾರದ ಪರ ವಾದಿಸಿದ್ದರು.