ದಾವಣಗೆರೆ, ಡಿ.17- ಅಪರ ಜಿಲ್ಲಾಧಿಕಾರಿ ಗಳವರ ನೂತನ ಮನೆಯಲ್ಲಿ ಕಳ್ಳತನವಾಗಿದ್ದು, ಸುಮಾರು ಒಂದೂವರೆ ಕೆಜಿ ತೂಕದ ಬೆಳ್ಳಿ ದೀಪ ಸೇರಿದಂತೆ ಅಮೂಲ್ಯವಾದ ವಸ್ತುಗಳನ್ನು ಕಳ್ಳರು ದೋಚಿ ರುವ ಘಟನೆ ನಗರದ ಎಸ್.ಎಸ್. ಲೇಔಟ್ ನ ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದ ಬಳಿ 6ನೇ ಕ್ರಾಸ್ ನಲ್ಲಿ ರಾತ್ರಿ ನಡೆದಿದೆ.
ಲೇಔಟ್‍ನಲ್ಲಿದ್ದ ಮನೆಯಲ್ಲಿ ಅಪರ ಜಿಲ್ಲಾಧಿ ಕಾರಿ ಪೂಜಾರ್ ವೀರಮಲ್ಲಪ್ಪ ಮತ್ತು ಕುಟುಂಬ ವರ್ಗದವರು ನಿನ್ನೆಯಷ್ಟೇ ಹಾಲು ಉಕ್ಕಿಸಿ, ಪೂಜೆ ಮಾಡಿದ್ದರು. ಈ ಮನೆಯ ಗೃಹ ಪ್ರವೇಶವೆಂಬ ಕಾರಣಕ್ಕೆ ಬೆಳ್ಳಿ ದೀಪಗಳು, ಬೆಳ್ಳಿ ದೇವರ ಮೂರ್ತಿ ಇಟ್ಟು ಪೂಜೆ ಮಾಡಿದ್ದರು. ಅಂದೇ ಹೊಸ ಮನೆಗೆ ಕೆಲವು ಸಾಮಾನುಗಳನ್ನು ಸಾಗಿಸಿದ್ದರು. ಗುರುವಾರದಿಂದ ನೂತನ ಮನೆಯಲ್ಲಿ ವಾಸ್ತವ್ಯ ಮಾಡಲು ಹಳೆಯ ಮನೆಯ ಸಾಮಾನುಗಳನ್ನೆಲ್ಲಾ ಜೋಡಿಸಿಕೊಂಡು ತರಲು ನಿರ್ಧರಿಸಿದ್ದರು. ಆದರೆ ನೂತನ ಮನೆಯಲ್ಲಿ ವಾಸ್ತವ್ಯ ಹೂಡದೇ ಬೀಗ ಹಾಕಿ ಹಳೇ ಮನೆಯಲ್ಲಿ ರಾತ್ರಿ ತಂಗಿದ್ದರು.
ಇದನ್ನೇ ಗಮನಿಸಿರುವ ಕಳ್ಳರು ನೂತನ ಮನೆಯ ಹಿಂಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಬೆಳ್ಳಿ ದೀಪಗಳು, ಬೆಳ್ಳಿ ವಿಗ್ರಹಗಳನ್ನು ಕಳವು ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ರೂಪಾ ತೆಂಬದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.