ತಂಬಾಕು ಚಟದಿಂದ ಸಮಾಜದ ಮೇಲೆ ದುಷ್ಪರಿಣಾಮ

ತಂಬಾಕು ನಿಯಂತ್ರಣ ಕಾರ್ಯಾಗಾರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಸಾಬಪ್ಪ

ದಾವಣಗೆರೆ, ಡಿ.17- ದುಷ್ಪರಿಣಾಮಗಳ ಬಗ್ಗೆ ತಿಳಿದೂ ತಂಬಾಕಿನ ದುಶ್ಚಟಕ್ಕೆ ಬಲಿಯಾಗುತ್ತಿರುವ ಯುವಜನತೆಗೆ ಈ ಬಗ್ಗೆ ಹೆಚ್ಚಿನ ಅರಿವು, ಮಾನಸಿಕ ಸ್ವಾಸ್ಥ್ಯದ ಮಹತ್ವ ಮತ್ತು ತಂಬಾಕು ನಿಯಂತ್ರಣ ಕಾಯ್ದೆಯ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ಇಂತಹ ತರಬೇತಿಗಳು ಸಹಕಾರಿಯಾಗಲಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದರು.

ಮಂಗಳವಾರ ನಗರದ ಚೇತನ ಹೋಟೆಲ್‍ನಲ್ಲಿ ಆಡಳಿತ ವೈದ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳಿಗೆ ತಂಬಾಕು ನಿಯಂತ್ರಣ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನೋಲ್ಲಾಸಕ್ಕಾಗಿ ಅಥವಾ ಇನ್ನಾವುದೋ ಒತ್ತಡದಿಂದಾಗಿ ಆರಂಭವಾದ ತಂಬಾಕಿನ ಸೇವನೆ ಚಟವಾಗಿ ಪರಿಣಮಿಸಿ ಅನೇಕ ದೈಹಿಕ ಮತ್ತು ಮಾನಸಿಕ ವ್ಯಾದಿಗಳಿಗೆ ಕಾರಣವಾಗಿ ಯುವಜನ ತೆಗೆ, ಅವರ ಕುಟುಂಬ ಮತ್ತು ಸುತ್ತಲಿನ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಆರೋಗ್ಯ, ಪೊಲೀಸ್, ಕಾನೂನು ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅರಿವು ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಟಾನ ಕಾರ್ಯಕ್ರಮಗಳನ್ನು ಸರ್ಕಾರ ಮಾಡುತ್ತಿದೆ. ವೈದ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವವರಿಗೆ ಜಾಗೃತಿ ಮೂಡಿಸುವ ಮೂಲಕ, ಭಿತ್ತಿಪತ್ರಗಳು, ಪೋಸ್ಟರ್‍ಗಳ ಮೂಲಕವೂ ಜನರಲ್ಲಿ ಅರಿವು ಮೂಡಿಸುವುದರಿಂದ ತಂಬಾಕು ನಿಯಂತ್ರಣ ಸಾಧ್ಯ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸದಸ್ಯ ಕಾರ್ಯದರ್ಶಿ ಡಾ.ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 17 ವರ್ಷಗಳಿಂದ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹದಿಹರೆಯದವರಲ್ಲೇ ತಂಬಾಕು ಉತ್ಪನ್ನ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಸರ್ಕಾರ ಅನೇಕ ಸಮೀಕ್ಷೆ ನಡೆಸಿ ನಿಯಂತ್ರಣ, ಅರಿವು ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಅರುಣ್‍ಕುಮಾರ್.ಎಲ್.ಹೆಚ್ ಮಾತನಾಡಿ, ಪ್ರತಿ ವರ್ಷ ವಿಶ್ವಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದು ಕಳವಳಕಾರಿ ವಿಷಯ ಎಂದರು.

ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಹಾಗೂ ಮನೋವೈದ್ಯ ಡಾ.ಗಂಗಾಧರ್.ಕೆ.ಹೆಚ್ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ ಇವರು ಕೋಟ್ಪಾ ಕಾಯ್ಡೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ ಸ್ವಾಗತಿಸಿ ದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಮಾಜ ಕಾರ್ಯಕರ್ತ ಕೆ.ಪಿ ದೇವರಾಜ್ ನಿರೂಪಿಸಿ ವಂದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ  ಗಳ ಸಂಯುಕ್ತಾ ಶ್ರಯದಲ್ಲಿ  ಕಾರ್ಯಕ್ರಮ ಏರ್ಪಡಿಸಲಾಗಿತ್ತು.

error: Content is protected !!