ತಂಬಾಕು ಸೇವನೆ ದುಷ್ಪರಿಣಾಮದ ಅರಿವು ಯುವ ಜನತೆಗೆ ಅವಶ್ಯ

ಡಿವೈಎಸ್‍ಪಿ ನಾಗೇಶ್ ಐತಾಳ್ ಅಭಿಮತ

ದಾವಣಗೆರೆ, ಡಿ.16- ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ದ ಪ್ರಕರಣ ದಾಖಲಿಸುವುದಷ್ಟೇ ಅಲ್ಲದೇ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿ, ದೂರ ಉಳಿಯುವಂತೆ ಮನವೊಲಿಸಬೇಕೆಂದು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ನೀಡಿದರು.

ನಗರದ ಚೇತನಾ ಹೋಟೆಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೋಟ್ಪಾ ಕಾನೂನು ಅನುಷ್ಠಾನ ಅಧಿಕಾರಿಗಳಿಗೆ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಸಾಮರ್ಥ್ಯಾಭಿವೃದ್ದಿ ಹಾಗೂ ಮೇಲ್ವಿಚಾರಣೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಸಭೆ, ಸಮಾರಂಭ ಮುಖೇನ ಜನಜಾಗೃತಿ ಹೆಚ್ಚಿಸಬೇಕು. ಇಲ್ಲಿ ತರಬೇತಿ ಹೊಂದಿದ ಪೊಲೀಸರು ಸೇರಿದಂತೆ, ವಿವಿಧ ಇಲಾಖೆಯ ಕಾಯ್ದೆ ಅನುಷ್ಠಾನ ಅಧಿಕಾರಿಗಳು ಯುವ ಜನತೆ ಮತ್ತು ಸಮುದಾಯಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಾಧಿಕಾರಿ ಡಾ. ಜಿ.ಡಿ.ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಟ್ಪಾ ಕಾಯ್ದೆ ಅನುಷ್ಠಾನ ಮಾಡಲು ಜಿಲ್ಲೆಯಲ್ಲಿ 6 ರಿಂದ 7 ಅಧಿಕಾರಿಗಳನ್ನೊಳಗೊಂಡ ಅನುಷ್ಠಾನಾಧಿಕಾರಿಗಳ ತಂಡ ರಚಿಸಿಕೊಂಡು ಪ್ರತಿ ತಿಂಗಳು ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ದಾಳಿ ಜೊತೆಗೆ ತಿಳುವಳಿಕೆ ಹಾಗೂ ಕಾಯ್ದೆ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಯುವಜನತೆ ಅದರಲ್ಲೂ 13 ರಿಂದ 18 ವರ್ಷದವರು ತಂಬಾಕು ಸೇವನೆಗೆ ಒಳಗಾಗುತ್ತಿದ್ದು, ಇದರಿಂದ ಹೊರ ತರುವ ಕೆಲಸವಾಗಬೇಕಿದೆ. ಜೀವನ ಶೈಲಿ ಬದಲಾವಣೆ ಸೇರಿದಂತೆ ಸ್ಪರ್ಧಾತ್ಮಕತೆಯನ್ನು ಎದುರಿಸಿ, ವ್ಯಸನಕ್ಕೆ ಬಲಿಯಾಗದಂತೆ ಆರೋಗ್ಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಹಾಗೂ ಮನೋವೈದ್ಯರಾದ ಡಾ. ಕೆ.ಹೆಚ್. ಗಂಗಾಧರ್ ಅವರು ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ ಅವರು ಕೋಟ್ಪಾ ಕಾಯ್ಡೆ ಕುರಿತು ಉಪನ್ಯಾಸ ನೀಡಿದರು. 

ಡಿಹೆಚ್‍ಇಓ ಡಾ. ಸುರೇಶ್ ಬಾರ್ಕಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ, ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೋಟ್ಪಾ ಕಾನೂನು ಅನುಷ್ಠಾನ ಅಧಿಕಾರಿಗಳು ಇದ್ದರು. 

ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ ಸ್ವಾಗತಿಸಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಮಾಜ ಕಾರ್ಯಕರ್ತ ಕೆ.ಪಿ. ದೇವರಾಜ್ ನಿರೂಪಿಸಿ, ವಂದಿಸಿದರು. 

error: Content is protected !!