ದಾವಣಗೆರೆ, ಡಿ.16- ತಾನು ಕರ್ತವ್ಯ ನಿರ್ವಹಿ ಸುತ್ತಿದ್ದ ಖಾಸಗಿ ಕಂಪನಿಯ ವ್ಯವಸ್ಥಾಪಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಿ ಉದ್ಯೋಗಿ ಯೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹಾಲುವರ್ತಿ ಗ್ರಾಮದಲ್ಲಿ ಇಂದು ನಡೆದಿದೆ.
ಹನುಮಂತ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ನಗರದ ಖಾಸಗಿ ಕಂಪನಿ ಕಚೇರಿಯಲ್ಲಿ ಈತ ಉದ್ಯೋಗಿಯಾಗಿದ್ದ.
ರಿಲಯನ್ಸ್ ಡಿಜಿಟಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬದುಕು ಕಟ್ಟಿಕೊಂಡಿದ್ದೆ. ನನ್ನ ಕನಸು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೆ. ಆದರೆ, ಅಲ್ಲಿನ ಮ್ಯಾನೇಜರ್ ಹಾಗೂ ಎಂಎಸ್ ತನಗೆ ಹಾಗೂ ಇತರರಿಗೆ ಕಿರುಕುಳ ನೀಡುತ್ತಿದ್ದರು. ತನಗೆ ಕೆಲಸ ಬಿಡುವಂತೆ ಮಾಡಿದ್ದು, ಇದರಿಂದ ಜೀವನ ನಿರ್ವಹಣೆಗೆ ತೊಂದರೆ, ಬೈಕ್‍ನ ಇಎಂಐ ಕಟ್ಟಲು ಸಹ ಕಷ್ಟವಾಗುವ ರೀತಿ ಮಾಡಿದ್ದರು. ಇದೇ ಕಾರಣಕ್ಕೆ ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಹನುಮಂತ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.