ದಾವಣಗೆರೆ, ಡಿ.16- ಸ್ಟೂಲ್ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮಗುವೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ನಗರದ ತ್ಯಾಪೇರಗಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಖಾಸಗಿ ಬಸ್ ಏಜೆಂಟ್ ಲಕ್ಷ್ಮೀಕಾಂತ್ ಹಾಗೂ ಲೋಕೇಶ್ವರಿ ಅವರ ಪುತ್ರ ಸುಮಾರು ಒಂದೂವರೆ ವರ್ಷದ ರೋಹನ್ ಮೃತ ದುರ್ದೈವಿ.
ಲೋಕೇಶ್ವರಿ ಅವರು ತನ್ನ ಮಗ ರೋಹನ್ ನನ್ನು ಎದುರು ಮನೆಗೆ ಕರೆದುಕೊಂಡು ಹೋಗಿ ತಿಂಡಿ ತಿನ್ನಿಸುತ್ತಿದ್ದರು. ಮಗನಿಗೆ ನೀರು ತರಲು ಲೋಕೇಶ್ವರಿ ಎದ್ದು ಹೋದಾಗ ರೋಹನ್ ಅಲ್ಲೇ ಇದ್ದ ಸ್ಟೂಲ್ ಹತ್ತಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ಒಳ ಪೆಟ್ಟಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ.