ಕೇಂದ್ರ ಆರೋಗ್ಯ ಸಚಿವಾಲಯದ ಆದೇಶದಂತೆ ಪಟ್ಟಿ ರವಾನಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಡಿ. 16 – ವೈದ್ಯರೂ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ಮೊದಲ ಆದ್ಯತೆಯಾಗಿ ಕೊರೊನಾ ಲಸಿಕೆ ನೀಡುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯದ ಆದೇಶದಂತೆ ಪಟ್ಟಿ ಸಿದ್ಧಪಡಿಸಿ ಕಳುಹಿಸಿದೆ.
ಈ ಮೊದಲು ಕೊರೊನಾ ವಾರಿಯರ್ಸ್ನ ಪ್ರತಿಯೊಬ್ಬರಿಗೂ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲು ಕೇಂದ್ರ ತೀರ್ಮಾನಿಸಿತ್ತು. ಆದರೆ, ಈಗಿನ ನಿರ್ಧಾರದ ಪ್ರಕಾರ ಮೊದಲ ಆದ್ಯತೆ ವೈದ್ಯಕೀಯ ಸಿಬ್ಬಂದಿಯಾಗಿದೆ.
ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಕೋ-ವಿನ್ ಜಾಲತಾಣಕ್ಕೆ ಹೆಸರುಗಳನ್ನು ಮತ್ತು ಸೇವಾ ವಿವರವನ್ನು ನೋಂದಾಯಿಸಬೇಕು. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಚೀಟಿ ಸಂಖ್ಯೆ ಮತ್ತು ಚುನಾವಣಾ ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್ ಅಥವಾ ಸರ್ಕಾರಿ ಸ್ವಾಮ್ಯದ ಗುರುತಿನ ಚೀಟಿಯನ್ನು ಲಗತ್ತಿಸಬೇಕು.
ನೋಂದಾವಣೆ ನಂತರ ಇವರು ಎಲ್ಲಿ ಲಸಿಕೆ ಪಡೆದುಕೊಳ್ಳಬೇಕೆಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಲಿದೆ.
ಮೊದಲ ಹಂತದಲ್ಲಿ ಪ್ರತಿನಿತ್ಯ ಒಂದು ಕೇಂದ್ರದಲ್ಲಿ 100 ರಿಂದ 200 ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಿದೆ. ಅದರಲ್ಲೂ, ಒಬ್ಬರಿಗೆ ಲಸಿಕೆ ನೀಡಿದ ನಂತರ ಆ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಘಟಕದಲ್ಲಿನ ವೈದ್ಯರು ಗಮನಿಸಲಿದ್ದಾರೆ.
ಇಡೀ ರಾಷ್ಟ್ರದಲ್ಲಿ ಮೊದಲ ಹಂತದಲ್ಲಿ ಮೂರು ಕೋಟಿ ಲಸಿಕೆ ನೀಡಲು ನಿರ್ಧರಿಸಲಾಗಿತ್ತಾದರೂ, ಮೊದಲು ಆರೋಗ್ಯ ಸಿಬ್ಬಂದಿಗೆ ಪೂರ್ಣವಾಗಿ ನೀಡಿದ ನಂತರ ಕೊರೊನಾ ವಾರಿಯರ್ಸ್ಗೆ ನೀಡಲಾಗುತ್ತದೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ ಬರುವ ಹೊಸ ವರ್ಷದ ಮೊದಲ ಮೂರು ತಿಂಗಳಲ್ಲೇ ರಾಜ್ಯದ ಎಲ್ಲಾ ಕೊರೊನಾ ವಾರಿಯರ್ಸ್ಗೆ ಲಸಿಕೆ ದೊರೆಯಲಿದೆ.
ನಂತರ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು, ಲಸಿಕೆ ಪಡೆಯುವ ಯಾರೇ ಆದರೂ ಕೇಂದ್ರ ಸರ್ಕಾರದ ಜಾಲತಾಣದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು, ಹೀಗೆ ನೋಂದಾಯಿಸಿಕೊಂಡವರು ಎರಡು ಗುರುತಿನ ಚೀಟಿಯನ್ನು ಲಗತ್ತಿಸಬೇಕು.
ಉಚಿತ ಲಸಿಕೆ ನೀಡುವ ಜೊತೆಗೆ ಶೇ. 50ರಷ್ಟು ಲಸಿಕೆಯನ್ನು ಮುಕ್ತ ಮಾರುಕಟ್ಟೆಗೂ ಬಿಡುಗಡೆ ಮಾಡಲು ಕೇಂದ್ರ ಚಿಂತಿಸಿದೆ.
ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಲಸಿಕೆ ಪಡೆಯಲು ನೂಕುನುಗ್ಗಲು ಆಗಬಹುದಲ್ಲದೆ, ಕೆಲವರು ಲಸಿಕೆ ಖರೀದಿಸಿ ಕಾಳಸಂತೆಯಲ್ಲಿ ಮಾರುವ ಸಾಧ್ಯತೆಯೂ ಇದೆ.
ಇದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಮತ್ತು ಇನ್ನೊಂದು ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನು ಪಾಲಿಸುವಂತೆ ರಾಜ್ಯಗಳಿಗೆ ಸೂಚಿಸಿ ಕೇಂದ್ರ ಸುತ್ತೋಲೆ ಹೊರಡಿಸಿದೆ.
ಲಸಿಕೆ ನೀಡಲಿರುವ ವೈದ್ಯಾಧಿಕಾರಿಗಳು, ಲಸಿಕಾಧಿಕಾರಿಗಳು ಹಾಗೂ ಲಸಿಕೆ ನಿರ್ವಹಣೆ ಮಾಡುವ ಶೈತ್ಯಾಗಾರ ಮೇಲ್ವಿಚಾರಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕೊಡಲಿದ್ದು, ಇದಕ್ಕಾಗಿ ಸಿದ್ಧರಾಗಿ ಎಂದು ತಿಳಿಸಲಾಗಿದೆ.