ಮಲೇ ಬೆನ್ನೂರು, ಡಿ.15- ಎಳೆ ಹೊಳೆ ಗ್ರಾ.ಪಂ. ವ್ಯಾಪ್ತಿಗೆ ಸೇರಿರುವ ಮಳಲಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಅವಶ್ಯವಿರುವ ಮೂಲಭೂತ ಸೌಲಭ್ಯ ನೀಡಿಲ್ಲ ಎಂದು ಆರೋಪಿಸಿ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಈ ಕುರಿತು ಮಂಗಳವಾರ ಎಳೆಹೊಳೆ ಗ್ರಾ.ಪಂ. ಚುನಾವಣಾ ಧಿಕಾರಿಗೆ ಮನವಿ ಪತ್ರ ನೀಡಿರುವ ಮಳಲಹಳ್ಳಿ ಗ್ರಾಮಸ್ಥರು 1974-75 ನೇ ಸಾಲಿನಲ್ಲಿ 33 ಮನೆಗಳನ್ನು ಹಂಚಿಕೆ ಮಾಡಿದ್ದು ಬಿಟ್ಟರೆ ಇದುವರೆಗೂ ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ದೂರಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಶಿವಪ್ರಸಾದ್, ಪಿಎಸ್ಐ ವೀರಬಸಪ್ಪ ಅವರು ಮಳಲಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಗ್ರಾಮಸ್ಥರ ತೀರ್ಮಾನ ಬುಧವಾರ ಗೊತ್ತಾಗಲಿದೆ. ನಾಮಪತ್ರ ಸಲ್ಲಿಸಲು ಬುಧವಾರ ಕಡೆಯ ದಿನವಾಗಿರುವುದರಿಂದ ಯಾರೂ ನಾಮಪತ್ರ ಸಲ್ಲಿಸದಿದ್ದರೆ ಚುನಾವಣೆ ಬಹಿಷ್ಕಾರದ ಅವರ ನಿರ್ಧಾರ ಅಚಲವಾಗಲಿದೆ.