ಉಜ್ಜಯಿನಿ ಪೀಠದ ಬಗ್ಗೆ ಕಾಶೀ ಜಗದ್ಗುರುಗಳ ಹೇಳಿಕೆಗೆ ಶ್ರೀ ರಂಭಾಪುರಿ, ಶ್ರೀ ಕೇದಾರ ಜಗದ್ಗುರುಗಳ ಖಂಡನೆ

ಹಣ ಪಡೆದಿದ್ದು ಸಾಬೀತುಪಡಿಸಿದರೆ ತಾವು ಕೈ ಕಳೆದುಕೊಳ್ಳುತ್ತೇವೆ. ಸಾಬೀತು ಪಡಿಸದಿದ್ದರೆ ಅವರು ನಾಲಿಗೆ ಕತ್ತರಿಸಿಕೊಳ್ಳಲಿ. 

ಕೇದಾರ ಜಗದ್ಗುರುಗಳ ಸವಾಲು

ದಾವಣಗೆರೆ, ಡಿ.13- ವೀರಶೈವ ಪಂಚ ಪೀಠಗಳಲ್ಲಿ ಒಂದಾಗಿರುವ ಶ್ರೀ ಉಜ್ಜಯಿನಿ ಪೀಠದ ವಿಚಾರವಾಗಿ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸತ್ಯಕ್ಕೆ ದೂರವಾದ ಹಲವಾರು ವಿಚಾರಗಳನ್ನು ಹೇಳಿರುವುದಕ್ಕೆ ಶ್ರೀ ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹಿಮವತ್ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮತ್ತು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಸ್ಥಿರ ಜಗದ್ಗುರು ಶ್ರೀ ತ್ರಿಲೋಚನ ಶಿವಾಚಾರ್ಯರನ್ನು ನಾವು ನೇಮಕ ಮಾಡಿರುವುದಿಲ್ಲ. ಈ ಕಾರ್ಯವನ್ನು 1997 ರಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರು ಪರಂಪರೆಯಿಂದ ಬಂದ ಪಂಚ ಮುದ್ರಾ ಸಹಿತ ಮೂಲ ಉಜ್ಜಯಿನಿಯಲ್ಲಿ ಪಟ್ಟಾಭಿಷೇಕ ಮಾಡಿ, ಸ್ವತಃ ತಮ್ಮೊಂದಿಗೆ ನಾಡಿನ ನಾನಾ ಭಾಗಗಳಲ್ಲಿ ಅಡ್ಡಪಲ್ಲಕ್ಕಿ ಹಾಗೂ ಧರ್ಮ ಸಭೆಗಳಲ್ಲಿ ಸಮಾನ ಆಸನದಲ್ಲಿ ಗೌರವಿಸಿದ್ದಾರೆ. ಹಿರಿಯರ ಈ ಕಾರ್ಯಕ್ಕೆ ನಾವೀರ್ವರೂ ಮುಕ್ತಿಮಂದಿರದಲ್ಲಿ ನಡೆದ ಶಕ್ತಿ ಸಂವರ್ಧನಾ ಸಂಕಲ್ಪ ಸಮಾರಂಭದಲ್ಲಿ ಮಾನ್ಯತೆ ನೀಡಿದ್ದೇವೆ. ಇದೇ ಸಂದರ್ಭದಲ್ಲಿ ನಾವು ಯಾರನ್ನೂ ಅಸಿಂಧುಗೊಳಿಸುವಂತಹ ಕೆಲಸ ಮಾಡಿರುವುದಿಲ್ಲ. ಆದರೂ ಸಹ ಕಾಶೀ ಜಗದ್ಗುರುಗಳು ಹಾಗೂ ಅವರ ಅನುಯಾಯಿಗಳು ಗೊಂದಲಗಳನ್ನು ಸೃಷ್ಠಿ ಮಾಡಿರುತ್ತಾರೆ ಎಂದು ತಿಳಿಸಿದರು.

ಈ ಸಮಸ್ಯೆ 1997 ರಿಂದಲೂ ಇದೆ. ತ್ರಿಲೋಚನ ಜಗದ್ಗುರುಗಳು ತಮ್ಮ ಪಟ್ಟಾಭಿಷೇಕದ ನಂತರ ತಮಗಾಗಿರುವ ಅನ್ಯಾಯವನ್ನು ಪರಿಶೀಲಿಸಿ ಉಜ್ಜಯಿನಿ ಪೀಠದ ಪರಂಪರೆಯನ್ನು ಮುಂದುವರೆಸಲು 2015 ರಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ ಅಧ್ಯಕ್ಷರಿಗೆ ಮನವಿ ಪತ್ರ ನೀಡಿರುತ್ತಾರೆ. ಇದರ ಜೊತೆಗೆ ಧಾರ್ಮಿಕ ಪರಂಪರೆ ಮತ್ತು ಕಾನೂನಾತ್ಮಕ ಪೂರಕ ದಾಖಲೆಗಳನ್ನು ನೀಡಿರುತ್ತಾರೆ. ಈ ಸಂಬಂಧವಾಗಿ 2015 ರ ಸೆಪ್ಟೆಂಬರ್‌ 16ನೇ ತಾರೀಖು ಶ್ರೀ ಮದ್ರಂಭಾಪುರಿ ಶಾಖಾ ಖಾಸಾ ಶಾಖಾ ಮಠ ಸಿದ್ಧರಬೆಟ್ಟದಲ್ಲಿ ಶ್ರೀ ರಂಭಾಪುರಿ, ಶ್ರೀ ಕೇದಾರ ಹಾಗೂ ಶ್ರೀ ಕಾಶೀ ಜಗದ್ಗುರುಗಳು ಸೇರಿ ಸುದೀರ್ಘ ಚರ್ಚೆ ನಡೆಸಿ ಉಜ್ಜಯಿನಿ ಪೀಠದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿತ್ತು. ಕಾಶೀ ಜಗದ್ಗುರುಗಳಿಗೆ ಎಲ್ಲಾ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟಾಗ್ಯೂ ಹೊನ್ನಾಳಿ ಹಿರೇಮಠದ ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಶ್ರದ್ಧಾಂಜಲಿ ಸಮಾರಂಭದಲ್ಲಿ 2015 ರ ನವೆಂಬರ್‌ 1 ರಂದು ಕಾಶೀ ಜಗದ್ಗುರುಗಳ ಪ್ರೇರಣೆಯಂತೆ ಇಂದಿನ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಅತಿರೇಖದ ಮಾತುಗಳನ್ನಾಡಿ ಸಮಸ್ಯೆ ಮತ್ತಷ್ಟು ಕಗ್ಗಂಟಾಗಲು ಕಾರಣರಾದರು. ಹೀಗೆ ಪಂಚ ಪೀಠಾಚಾರ್ಯರಲ್ಲಿ ಪರಸ್ಪರ ವಿಶ್ವಾಸಕ್ಕೆ ಧಕ್ಕೆ ಉಂಟಾಗಲು ಹಾಗೂ ಪೀಠ ಪರಂಪರೆ ಉಲ್ಲಂಘಿಸಿದ್ದಕ್ಕೆ ಕಾಶೀ ಜಗದ್ಗುರುಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದರು.

1918 ರಲ್ಲಿ ಕಾಶೀ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾವೇಶದಲ್ಲಿ ಕೈಗೊಂಡ ಒಂದು ಪೀಠಕ್ಕೆ ಒಬ್ಬರೇ ಜಗದ್ಗುರುಗಳಿರಬೇಕೆಂಬ ನಿಯಮಾವಳಿಯ ಅರ್ಧ ಸತ್ಯವನ್ನು ಮಾತ್ರ ಕಾಶೀ ಜಗದ್ಗುರುಗಳು ಹೇಳಿದ್ದಾರೆ ಹೊರತು, ನಂತರದ ವಿಚಾರಗಳನ್ನು ಗಮನಿಸಿರುವುದಿಲ್ಲ. ಈ ನಿರ್ಣಯ ಕೈಗೊಳ್ಳುವಾಗ ಕೇದಾರ ಪೀಠದ ವಿಶ್ವಲಿಂಗ ಜಗದ್ಗುರುಗಳು ಉಪಸ್ಥಿತರಿರಲಿಲ್ಲ. ಮುಂದೆ ಉಜ್ಜಯಿನಿ ಪೀಠದ ಸಿದ್ಧಲಿಂಗ ಜಗದ್ಗುರುಗಳು ಕೇದಾರ ಜಗದ್ಗುರುಗಳನ್ನು ಬರಮಾಡಿಕೊಂಡು ಹಲವಾರು ಭಾಗಗಳಲ್ಲಿ ಉತ್ಸವ, ಸಮಾರಂಭಗಳನ್ನು ನೆರವೇರಿಸಿದರು. ಈ ಪೂರ್ವದಲ್ಲಿಯೇ ಕೇದಾರ ಪೀಠಕ್ಕೆ ಸ್ಥಿರ-ಚರ ಜಗದ್ಗುರುಗಳನ್ನು ನಿಯಮಿಸಿ ಕೇದಾರ ಪೀಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕರಿಸಬೇಕೆಂದು ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಿಗೆ ವಿಶ್ವಲಿಂಗ ಜಗದ್ಗುರುಗಳು ಮನವಿ ಮಾಡಿಕೊಂಡಿದ್ದರು. 

ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಲಿಂಗೈಕ್ಯರಾದ ಮೇಲೆ ಉಜ್ಜಯಿನಿ ಸಿದ್ಧೇಶ್ವರ ಜಗದ್ಗುರುಗಳವರ ಪಟ್ಟಾಭಿಷೇಕವನ್ನು ರಂಭಾಪುರಿ ಶಿವಾನಂದ ಜಗದ್ಗುರುಗಳು ಕೇದಾರ ಚಿದ್ಘನಲಿಂಗ ಜಗದ್ಗುರುಗಳು ನೆರವೇರಿಸಿದರು. ಇಂಥ ಅನೇಕ ಪ್ರಮಾಣಗಳಿಂದ ಒಂದು ಪೀಠಕ್ಕೆ ಒಬ್ಬರೇ ಜಗದ್ಗುರುಗಳಿರಬೇಕೆಂಬ 1918 ರ ನಿಯಮ ಮುರಿದುಹೋಗಿದೆ. ಅಷ್ಟೇ ಅಲ್ಲದೇ ಲಿಂಗೈಕ್ಯರಾದ ಮುರುಳಸಿದ್ದ ಜಗದ್ಗುರುಗಳಿಗೆ ಚರ ಪಟ್ಟಾಧಿಕಾರ ಕೊಟ್ಟ ದಾಖಲೆ ಸ್ಪಷ್ಟವಾಗಿದ್ದರೂ ಕಾಶೀ ಜಗದ್ಗುರುಗಳು ಜಾಣ ಕುರುಡರಂತೆ ವರ್ತಿಸುವುದರ ಹಿನ್ನೆಲೆ ಎಲ್ಲರಿಗೂ ಗೊತ್ತಾಗುತ್ತದೆ. ಶ್ರೀ ಜಗದ್ಗುರು ಪಂಚಾಚಾರ್ಯರ ಒಕ್ಕೂಟ ವ್ಯವಸ್ಥೆೆಯ ನಿಯಮ ನಿಬಂಧನೆಗಳನ್ನು ಕಾಶೀ ಜಗದ್ಗುರುಗಳೇ ಉಲ್ಲಂಘಿಸಿದ್ದನ್ನು ಕಾಣಬಹುದು ಎಂದು ತಿಳಿಸಿದರು.

 ಉಜ್ಜಯಿನಿ ಪೀಠದ ವಿಚಾರವೇ ಇರಲಿ, ಇನ್ನೊಂದು ವಿಚಾರಗಳಿರಲಿ ಪರಸ್ಪರ ಸದ್ಭಾವನೆಯಿಂದ ಕುಳಿತು ಮಾತನಾಡಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪಂಚ ಪೀಠಗಳ ಆಂತರಿಕ ವಿಚಾರವಾಗಿರುವುದರಿಂದ ನಾಲ್ಕು ಗೋಡೆ ಮಧ್ಯೆ ಪರಿಹಾರ ಆಗಲೆಂಬ ಸದುದ್ದೇಶ ನಮಗಿರುವಾಗ ಕಾಶೀ ಜಗದ್ಗುರುಗಳು ಸಮಾಲೋಚಿಸದೇ ನೇರವಾಗಿ ಪತ್ರಿಕೆಗಳಿಗೆ ಮತ್ತು ದೃಶ್ಯ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಠಿ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅನೇಕ ಶಿವಾಚಾರ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!