ಜಮೀನು ಮಾರಾಟದ ಹಣಕಾಸಿನ ವೈಷಮ್ಯ
ದಾವಣಗೆರೆ, ಡಿ.11- ಜಮೀನು ಮಾರಾಟದ ಹಣಕಾಸಿನ ವೈಷಮ್ಯದಿಂದ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬ ರನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ನಗರದ ಭಗತ್ ಸಿಂಗ್ ನಗರ 4ನೇ ಕ್ರಾಸ್ ವಾಸಿ ಕೆಎಸ್ಸಾರ್ಟಿಸಿ ನಿವೃತ್ತ ಚಾಲಕ ಎಂ.ಕೆ. ಕೃಷ್ಣಪ್ಪ ಮತ್ತು ಆತನ ಮಗ – ತರಕಾರಿ ಗುಮಾಸ್ತ ಎಂ.ಕೆ. ಸತೀಶ್ ಬಂಧಿತ ಆರೋಪಿಗಳು.
2020, ಡಿಸೆಂಬರ್ 6 ರಂದು ತಾಲ್ಲೂಕಿನ ಹುಲಿ ಕಟ್ಟೆ ಗ್ರಾಮದ ಗೋಮಾಳ ಜಮೀನಿನಲ್ಲಿ ಸುಮಾರು 30-35 ವರ್ಷದ ಅಪರಿಚಿತ ವ್ಯಕ್ತಿಯ ಕತ್ತನ್ನು ಕೊಯ್ದು ಕೊಲೆ ಮಾಡಿ ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದರು.
ಮೃತನ ಶವದ ಮೇಲಿದ್ದ ಬೆಳ್ಳಿಯ ಕೈಕಡಗ ಮತ್ತು ಕೈ ಬೆರಳಿನಲ್ಲಿದ್ದ ಬೆಳ್ಳಿಯ ಆಮೆಯ ಉಂಗುರ ಮತ್ತು ಮೃತ ಧರಿಸಿದ್ದ ಜೀನ್ಸ್ ಪ್ಯಾಂಟಿನ ಮಾಹಿತಿ ಮೇರೆಗೆ ಈ ಪ್ರಕರಣವನ್ನು ಭೇದಿಸಲು ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ರಚಿಸಲಾಗಿದ್ದ ಸಿಪಿಐ ತನಿಖಾ ಧಿಕಾರಿ ಮಂಜುನಾಥ, ಪಿಎಸ್ ಐ ಅಶ್ವಿನ್ ಕುಮಾರ ಹಾಗೂ ಸಿಬ್ಬಂದಿಗಳಾದ ನಾಗರಾಜಯ್ಯ, ದೇವೇಂದ್ರ ನಾಯ್ಕ, ಮಂಜುನಾಥ, ವಿಶ್ವನಾಥ, ಶ್ರೀನಿವಾಸ, ಅಣ್ಣಯ್ಯ ಮತ್ತು ರಾಜು ಲಮಾಣಿ ಒಳಗೊಂಡ ತನಿಖಾ ತಂಡವು ಮೃತನ ಮೈಮೇಲೆ ದೊರೆತ ಕುರುಹುಗಳ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿಲಾಗಿದೆ.
ಹಿನ್ನೆಲೆ: ಎಸ್ ಪಿಎಸ್ ನಗರ 2ನೇ ಕ್ರಾಸ್ ವಾಸಿ ಮೃತ ವೀರೇಶ್ ಹುಲಿಕಟ್ಟೆ ಗ್ರಾಮದ ವಿಚ್ಛೇದಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಆಕೆ ಹೆಸರಿನಲ್ಲಿದ್ದ 6 ಎಕರೆ ಜಮೀನನ್ನು ಈತ ಆರೋಪಿ ಕೃಷ್ಣಪ್ಪನಿಗೆ 31.5 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಆದರೆ, ಆತನ ಹೆಸರಿಗೆ ಹಕ್ಕು ಬದಲಾವಣೆ ಮಾಡಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದವುಂಟಾಗಿತ್ತು. ಇದೇ ವೈಷಮ್ಯದಿಂದ ಆರೋಪಿಗಳಾದ ಕೃಷ್ಣಪ್ಪ ಮತ್ತು ಆತನ ಮಗ ಸತೀಶ ಇಬ್ಬರು ಸೇರಿಕೊಂಡು ಭಗತ್ ಸಿಂಗ್ ನಗರದ ತಮ್ಮ ಮನೆಗೆ ಡಿ.6ರಂದು ಊಟದ ನೆಪದಲ್ಲಿ ವೀರೇಶ್ ನನ್ನು ಕರೆಯಿಸಿಕೊಂಡಾಗಲೂ ವಾಗ್ವಾದ ನಡೆದಿತ್ತು. ಆತನ ಕೊರಳಿಗೆ ಪ್ಲಾಸ್ಟಿಕ್ ಹಗ್ಗದಿಂದ ಸುತ್ತಿ ಕೊಲೆ ಮಾಡಿ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ನಂತರ ಕೊಲೆ ಮರೆಮಾಚಲು ಓಮಿನಿ ವ್ಯಾನಿನಲ್ಲಿ ಮೃತ ದೇಹವನ್ನು ತಂದು ಅದರ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದರು.
ಮೃತನ ಬೈಕ್ ಅನ್ನು ಹರಿಹರದ ಬಸ್ ನಿಲ್ದಾಣಕ್ಕೆ ಒಯ್ದು ಬಿಟ್ಟು ಬಂದಿದ್ದು ತನಿಖೆಯಲ್ಲಿ ಬಯಲಾಗಿದೆ. ಮೃತನ ಜೊತೆಗಿದ್ದ ಮಹಿಳೆ ಸೇರಿ ಪ್ರಕರಣದ ಸಮಗ್ರ ತನಿಖೆ ಮುಂದುವರೆಸಲಾಗಿದೆ ಎಂದು ಎಸ್ಪಿ ಹನುಮಂತರಾಯ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಎಂ. ರಾಜೀವ್, ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಇದ್ದರು.