ಹರಪನಹಳ್ಳಿ, ಡಿ.10- ಬೀದಿ ಬದಿ ವ್ಯಾಪಾರಿಗಳು ಕೊರೊನಾ ವೈರಸ್‍ನಿಂದ ತೊಂದರೆಗೆ ಒಳಗಾಗಿದ್ದು ಅವರಿಗೆ ಆರ್ಥಿಕ ಸಹಕಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಕೌಶಲ್ಯ ಇಲಾಖೆ ವ್ಯವಸ್ಥಾಪಕ ಪ್ರಾಣೇಶ ಹೇಳಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಆತ್ಮ ನಿರ್ಭರ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹೆಚ್ಚಾಗಿ ಆನ್ ಲೈನ್ ವ್ಯವಹಾರವನ್ನು ವೃದ್ಧಿಗೊಳಿಸಿದಲ್ಲಿ ಕೇಂದ್ರ ಸರ್ಕಾರ ಅವರಿಗೆ ಮಾರ್ಜಿನ್ ಹಣ ನೀಡಲಿದೆ ಎಂದರು.
ಸಮುದಾಯ ಸಂಘಟಕ ಲೋಕ್ಯಾನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ ಸಾಲವನ್ನು ನೀಡುತ್ತಿದ್ದು, ವ್ಯಾಪಾರಸ್ಥರು ಸಮಯಕ್ಕೆ ಸರಿಯಾಗಿ ಹಣ ಮರು ಪಾವತಿಸಿದರೆ, ಹೆಚ್ಚಿನ ಸೌಲಭ್ಯ ಕೂಡ ದೊರೆಯುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಂಗ್ಲಿ ಅಂಜಿನಪ್ಪ, ಸದಸ್ಯರುಗಳಾದ ರಾಜು ಸಂಡೂರು, ಎಂ. ಶಾಂತಾನಾಯ್ಕ, ಶಿವನಾಗಪ್ಪ, ಭೀರಾನಾಯ್ಕ, ಕೆ.ವೀರೇಶ್, ಎಸ್. ಬಸಮ್ಮ, ಉಲ್ಲಾಸಿನಿ, ಲಕ್ಷ್ಮಿ, ಎಂ. ತಿರುಪತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.